5 ಮಂದಿ ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರ ಸೆರೆ, 75 ಲಕ್ಷ ಬೆಲೆಯ 46 ಬೈಕ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Police-Arrrest--01

ಬೆಂಗಳೂರು, ಜು.7-ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ವೃತ್ತಿಪರ ಐದು ಮಂದಿ ಆರೋಪಿಗಳನ್ನು ಎಚ್‍ಎಸ್‍ಆರ್ ಠಾಣೆ ಪೊಲೀಸರು ಬಂಧಿಸಿ 75 ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪೆನಿಗಳ 46 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಮೂಲದ ಮಹಮ್ಮದ್ ಮುಜಾಹಿದ್ (24), ಮುಸ್ತಾಕಿನ್ (19), ಇಸ್ತಿಯಾಖ್(25), ನೂರ್ ಅಹಮ್ಮದ್ (21), ಜುಲ್ಫಿಕರ್ ಅಲಿ (20) ಬಂಧಿತ ಕಳ್ಳರು.

ನಗರದ ಆಗ್ನೇಯ ವಿಭಾಗದ ಎಚ್.ಎಸ್.ಆರ್. ಲೇಔಟ್, ಪರಪ್ಪನ ಅಗ್ರಹಾರ, ಬಂಡೇಪಾಳ್ಯ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಲು ಎಚ್‍ಎಸ್‍ಆರ್ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಲು ಮುಂದಾಗಿದ್ದಾರೆ.

ಈ ವೇಳೆ ಕಾರಿನಲ್ಲಿದ್ದವರು ಪೊಲೀಸರಿಗೆ ಸರಿಯಾಗಿ ಮಾಹಿತಿ ನೀಡದ ಕಾರಣ ವಶಕ್ಕೆ ಪಡೆದು ವಿಚಾರಿಸಿದಾಗ ಇವರೆಲ್ಲರೂ ತಮಿಳನಾಡು ರಾಜ್ಯದ ವೇಲೂರು ಜಿಲ್ಲೆಯ ಆಂಬೂರು ನಿವಾಸಿಗಳೆಂದು ತಿಳಿಸಿದ್ದು, ದ್ವಿಚಕ್ರ ವಾಹನ ಕಳವು ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ.ಇವರ ಹೇಳಿಕೆ ಮೇರೆಗೆ ಸುಮಾರು 75 ಲಕ್ಷ ರೂ. ಬೆಲೆಬಾಳುವ 46 ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಎಚ್‍ಎಸ್‍ಆರ್ ಲೇಔಟ್ ಹಾಗೂ ಅಕ್ಕಪಕ್ಕದ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 46 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

15 ರಾಯಲ್ ಎನ್‍ಫೀಲ್ಡ್ ಬೈಕ್, 13 ಕೆಟಿಎಂ ಡ್ಯೂಕ್, 10 ಬಜಾಜ್ ಪಲ್ಸರ್, 7 ಯಮಹಾ ಹಾಗೂ ಒಂದು ಹೋಂಡಾ ಶೈನ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಜುಲ್ಫಿಕರ್ ಆಲಿ 2017ರಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಬಂಧಿತನಾಗಿದ್ದು, 37 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವರಿಂದ ಇನ್ನೂ ಹಲವು ಬೈಕ್‍ಗಳನ್ನು ವಶಪಡಿಸಿಕೊಳ್ಳಬೇಕಿದೆ. ಆರೋಪಿಗಳು ಬೈಕ್‍ಗಳನ್ನು ಕಳ್ಳತನ ಮಾಡಿ ಡಿಸ್‍ಮ್ಯಾಂಟಲ್ ಮಾಡಿ ಬಿಡಿ ಭಾಗಗಳನ್ನು ಮಾಡಿರುವುದು ತಿಳಿದುಬಂದಿದೆ.

ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಮಡಿವಾಳ ಎಸಿಪಿ ಸಂಪತ್‍ಕುಮಾರ್, ಇನ್ಸ್‍ಪೆಕ್ಟರ್ ನಾಗರಾಜ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸಿರುವ ಎಚ್‍ಎಸ್‍ಆರ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.

Facebook Comments

Sri Raghav

Admin