ದರೋಡೆಗೆ ಸ್ಕೆಚ್ ಹಾಕಿದ್ದ ಮೂವರು ರೌಡಿಗಳು ಸೇರಿ 5 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ದರೋಡೆಗೆ ಸಂಚು ರೂಪಿಸುತ್ತಿದ್ದ ಮೂವರು ರೌಡಿಗಳು ಸೇರಿ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಬಾಗಲಗುಂಟೆಯ ಅಶೋಕನಗರ ನಿವಾಸಿ ರಘು ಅಲಿಯಾಸ್ ಕೋತಿ ರಘು (27), ವಿಲ್ಸನ್ ಗಾರ್ಡನ್ ನಿವಾಸಿ ಗಣೇಶ್ ಅಲಿಯಾಸ್ ಗಣಿ (27), ದಾಸರಹಳ್ಳಿಯ ಚೊಕ್ಕಸಂದ್ರ ನಿವಾಸಿ ರಂಜನ್ (29), ಲಗ್ಗೆರೆ, ಕಾವೇರಿನಗರದ ಸುನೀಲ್‍ಕುಮಾರ್ (31) ಮತ್ತು ಜಾಲಹಳ್ಳಿ ಕ್ರಾಸ್, ವಿವೇಕಾನಂದ ನಗರದ ರಾಜಶೇಕರ್ (27) ಬಂಧಿತ ರೌಡಿಗಳು.

ನಗರದ ಪೀಣ್ಯ 1ನೆ ಹಂತ, ಇಂಡಸ್ಟ್ರಿಯಲ್ ಏರಿಯಾದ ಕಿರ್ಲೋಸ್ಕರ್ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರಿಂದ ಹಣ-ಆಭರಣ ದೋಚಲು ಹೊಂಚು ಹಾಕಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ ಮಚ್ಚು, ಲಾಂಗು, ಖಾರದ ಪುಡಿ ಪೊಟ್ಟಣ ವಶಪಡಿಸಿಕೊಂಡಿದ್ದಾರೆ.ಆರೋಪಿ ರಘು ಬಾಗಲಗುಂಟೆ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಬಾಗಲಗುಂಟೆ, ಪೀಣ್ಯ, ಮಹಾಲಕ್ಷ್ಮಿ ಲೇಔಟ್ ಠಾಣೆಗಳಲ್ಲಿ 2 ಕೊಲೆ ಪ್ರಕರಣ, 2 ಕೊಲೆ ಯತ್ನ ಪ್ರಕರಣಗಳು ಸೇರಿದಂತೆ 4 ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿ ಗಣೇಶ್ ಬಸವೇಶ್ವರನಗರ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ ಠಾಣೆಗಳಲ್ಲಿ 2 ಕೊಲೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಯತ್ನ, ಬಸವೇಶ್ವರನಗರ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ.

3ನೆ ಆರೋಪಿ ರಂಜನ್ ಪೀಣ್ಯ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಪೀಣ್ಯ, ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಒಂದೊಂದು ಕೊಲೆ ಯತ್ನ ಪ್ರಕರಣ ದಾಖಲಾದರೆ ಆರೋಪಿ ಸುನಿಲ್‍ಕುಮಾರ್ ವಿರುದ್ಧ ಮೂರು ವರ್ಷದ ಹಿಂದೆ 1 ಪ್ರಕರಣ ದಾಖಲಾಗಿದೆ.
ಮುಂದಿನ ತನಿಖೆಗಾಗಿ ಆರೋಪಿಗಳ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin