ಸಿಡಿಲಿನಬ್ಬರಕ್ಕೆ ರಾಜ್ಯದಲ್ಲಿ ಐವರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ/ದಾವಣಗೆರೆ, ಮೇ 27- ನಿನ್ನೆ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಸಿಡಿಲಿಗೆ ಐವರು ಬಲಿಯಾಗಿದ್ದಾರೆ. ಹಾವೇರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಗ್ರಾಮಗಳಲ್ಲಿ ಕೃಷಿಯಲ್ಲಿ ತೊಡಗಿದ್ದ ಮೂವರು ರೈತರು ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲಿಗೆ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ. ರಾಣೆಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡರ (48) ಎಂಬುವವರು ಮೃತಪಟ್ಟಿದ್ದಾರೆ.

ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಿಡಿಲಿಗೆ ಅರೇಹಳ್ಳಿ ಗ್ರಾಮದ ವಿರೂಪಾಕ್ಷಪ್ಪ(45) ಎಂಬುವರು ಬಲಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮೃತ ರೈತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರೇಣುಕಾಚಾರ್ಯ ಅವರು ಸಾಂತ್ವಾನ ಹೇಳಿದ್ದಾರೆ.

ಹರಪ್ಪನ ತಾಲೂಕಿನಲ್ಲಿ ಭಾರೀ ಮಳೆ ಬಿದ್ದು ಸಿಡಿಲು ಬಡಿದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಿಗಟೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಿರಣ್(17) ಮತ್ತು ಅರವಿಂದ (19) ಮೃತ ದುರ್ದೈವಿಗಳು. ಉದ್ಯೋಗ ಖಾತ್ರಿ ಕೂಲಿಗೆ ಹೋಗಿದ್ದ ಈ ಯುವಕರಿಗೆ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಇನ್ನೂ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಗಟೇರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ಆನಂದ್ (38) ಎಂಬುವವರು ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಡೆದ ಸಿಡಿಲಿಗೆ ಇವರು ಬಲಿಯಾಗಿದ್ದಾರೆ.

ಒಟ್ಟಾರೆ ನಿನ್ನೆ ಸುರಿದ ಧಾರಾಕಾರ ಮಳೆಗೆ ಅವಘಡಗಳು ಸಂಭವಿಸಿವೆ. ಮೂವರು ರೈತರು ಬಲಿಯಾಗಿದ್ದಾರೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

Facebook Comments