ಯಮನಾಗಿ ಬಂದ ಆಂಬ್ಯುಲೆನ್ಸ್, ಯಲಹಂಕ ಬಳಿ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಯಲಹಂಕ,ಮೇ 27- ಅತಿವೇಗವಾಗಿ ಬಂದ ಆಂಬ್ಯುಲೆನ್ಸ್ ವಾಹನ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಗನರ್ ಕಾರಿಗೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ತಡರಾತ್ರಿ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್.ಟಿ.ನಗರ ನಿವಾಸಿಗಳಾದ ದೀಪಂಕ ಡೇ(46) ಇವರ ಪತ್ನಿ ಸುಜಯ್(43), ಮಗ ಧ್ರವ ಡೇ(14) ಮತ್ತು ದೀಪಂಕ ಅವರ ತಂದೆ ಜಯಥಿ(65), ತಾಯಿ ಸ್ವಾಗತ ಚೌಧರಿ(42) ಮೃತಪಟ್ಟ ದುರ್ದೈವಿಗಳು.

ದೀಪಂಕ ಅವರ ತಂದೆತಾಯಿ ಚೆನ್ನೈನಲ್ಲಿ ವಾಸವಾಗಿದ್ದು, ತಂದೆ ಜಯಥಿ ಅವರು ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಮೂರು ದಿನಗಳ ಹಿಂದಷ್ಟೇ ಚೆನ್ನೈನಿಂದ ಬೆಂಗಳೂರಿಗೆ ಬಂದು ಮಗನ ಮನೆಯಲ್ಲಿ ಉಳಿದುಕೊಂಡಿದ್ದರು.

ನಿನ್ನೆ ಕುಟುಂಬದವರೆಲ್ಲ ಹೊರಗೆ ತೆರಳಿದ್ದು, ವಿವಿಧೆಡೆ ಸುತ್ತಾಡಿ ರಾತ್ರಿ ರೆಸಾರ್ಟ್‍ವೊಂದರಲ್ಲಿ ಊಟ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿನಲ್ಲಿ ಮನೆಗೆ ತೆರಳುತ್ತಿದ್ದರು.

ಯಲಹಂಕದ ಕೋಗಿಲು ಕ್ರಾಸ್ ಬಳಿ ಬರುತ್ತಿದ್ದಂತೆ ಬೆಂಗಳೂರು ಕಡೆಯಿಂದ ಅತಿವೇಗವಾಗಿ ಮುನ್ನುಗ್ಗಿ ಬಂದ ಆ್ಯಂಬುಲೆನ್ಸ್ ವಾಹನ ರಸ್ತೆ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ಹಾರಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಆ್ಯಂಬುಲೆನ್ಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನೊಂದಿಗೆ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೃತ ದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.  ಇವರೆಲ್ಲ ಇಂದು ಮುಂಜಾನೆ ಚೆನ್ನೈಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin