ಪ್ರಮಾಣ ವಚನ ಸ್ವೀಕರಿಸಿದ ಐವರು ನೂತನ ಪರಿಷತ್ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.30-ವಿಧಾನಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಐವರು ನೂತನ ಸದಸ್ಯರು ಇಂದು ಮೇಲ್ಮನೆ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸದಸ್ಯರಿಗೆ ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅಧಿಕಾರ ಗೌಪ್ಯತೆ ಬೋಧಿಸಿದರು.

ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಹಾಗೂ ಭಾರತಿ ಶೆಟ್ಟಿ, ಶಾಂತರಾಮ್ ಸಿದ್ದಿ ಮತ್ತು ಡಾ.ತಳವಾರ್ ಸಾಬಣ್ಣ ಮೇಲ್ಮನೆ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.

ಇವರಲ್ಲಿ ಭಾರತೀ ಶೆಟ್ಟಿ ಹೊರತುಪಡಿಸಿದರೆ ಉಳಿದ ನಾಲ್ವರು ಮೊದಲ ಬಾರಿಗೆ ಪರಿಷತ್ ಪ್ರವೇಶಿಸಿದ್ದಾರೆ. ಈ ಹಿಂದೆ ಸಿಪಿ ಯೋಗೇಶ್ವರ್ ಮತ್ತು ಎಚ್.ವಿಶ್ವನಾಥ್ ಶಾಸಕರಾಗಿ ಬಳಿಕ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.

ಶಾಂತರಾಮ್ ಸಿದ್ದಿ ಮತ್ತು ಡಾ.ತಳವಾರ್ ಸಾಬಣ್ಣ ಮೊದಲ ಬಾರಿಗೆ ಮೇಲ್ಮನೆ ಪ್ರವೇಶ ಮಾಡಿದ್ದಾರೆ. ಕಳೆದ ವಾರವಷ್ಟೇ ಈ ಐವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಲಾಯಿತು. ಸರ್ಕಾರ ಕಳುಹಿಸಿದ್ದ ಶಿಫಾರಸ್ಸಿನ ಪಟ್ಟಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಂಕಿತ ಹಾಕಿದ್ದರು.

ಸಾಹಿತ್ಯ, ಸಿನಿಮಾ, ಕ್ರೀಡೆ, ಮಹಿಳಾ ಸಬಲೀಕರಣ, ಸಮಾಜ ಸೇವೆ , ಶಿಕ್ಷಣ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಮೇಲ್ಮನೆಗೆ ಆಯ್ಕೆ ಮಾಡಲಾಗುತ್ತದೆ.

ಇದೇ ರೀತಿ ಸಿ.ಪಿ.ಯೋಗೇಶ್ವರ್ (ಸಿನಿಮಾ), ಎಚ್.ವಿಶ್ವನಾಥ್(ಸಾಹಿತ್ಯ), ಭಾರತಿ ಶೆಟ್ಟಿ(ಮಹಿಳಾ ಸಬಲೀಕರಣ), ಡಾ.ತಳವಾರ್ ಸಾಬಣ್ಣ(ಶಿಕ್ಷಣ) ಹಾಗೂ ಶಾಂತರಾಮ್ ಸಿದ್ದಿ(ಸಮಾಜ ಸೇವೆ) ಅವರುಗಳನ್ನು ಮೇಲ್ಮನೆಗೆ ನಾಮಕರಣ ಮಾಡಲಾಗಿತ್ತು.

ಇದರಲ್ಲಿ ವಿಶ್ವನಾಥ್ ಮತ್ತು ಸಿ.ಪಿ.ಯೋಗೇಶ್ವರ್ ಈ ಹಿಂದೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿತರಗೊಳಿಸಲು ಶಾಸಕರನ್ನು ಸೆಳೆಯುವಲ್ಲಿ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದರು.

ಹೀಗಾಗಿಯೇ ಅವರ ಋಣ ಸಂಧಾನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಈ ಇಬ್ಬರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.

ಇನ್ನು ಅಧಿಕಾರ ಸ್ವೀಕರಿಸುವ ವೇಳೆ ಬಿಜೆಪಿ ಮುಖಂಡರು ಹಾಗೂ ಅವರ ಕುಟುಂಬದ ವರ್ಗದವರು, ಹಿತೈಷಿಗಳು, ಅಭಿಮಾನಿಗಳು ಹಾಜರಿದ್ದರು. ಈ ವೇಳೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

Facebook Comments

Sri Raghav

Admin