50 ದಿನಗಳಲ್ಲಿ ನೋಟಿನ ಸಮಸ್ಯೆ ನಿವಾರಣೆ : ಅರುಣ್ ಜೇಟ್ಲಿ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

Arun-jaitly-01

ನವದೆಹಲಿ/ಮುಂಬೈ,ಡಿ.17– ಪ್ರಧಾನಿ ನರೇಂದ್ರ ಮೋದಿ ನೀಡಿರುವ 50 ದಿನಗಳ ಗಡುವಿನ ಒಳಗೆ ದೇಶಾದ್ಯಂತ ತಲೆದೋರಿರುವ ನೋಟು ರದ್ದತಿ ಅನಾನುಕೂಲ ನಿವಾರಣೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಷ್ಟ್ರದ ಜನತೆಗೆ ಭರವಸೆ ನೀಡಿದ್ದಾರೆ.   ಮೋದಿ ಸರ್ಕಾರವು ಜನರ ಬವಣೆಯನ್ನು ನೀಗಿಸಲು ಹಗಲು-ರಾತ್ರಿ ಶ್ರಮಿಸುತ್ತಿದೆ. ದೇಶದ ಜನರಿಗೆ ಸದ್ಯದಲ್ಲೇ ನೋಟು ರದ್ದತಿ ಉಂಟಾಗಿರುವ ಬವಣೆ ನೀಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಅತಿ ಶೀಘ್ರದಲ್ಲೇ ಕರೆನ್ಸಿ ಅಸಮತೋಲನವನ್ನು ನೀಗಿಸಲಿದೆ ಎಂದು ಅವರು ಆಶ್ವಾಸನೆ ನೀಡಿದರು.

ಎಫ್‍ಐಸಿಸಿ 89ನೇ ವಾರ್ಷಿಕ ಸರ್ವಸದಸ್ಯರ ಸಭೆ(ಎಜಿಎಂ)ಯಲ್ಲಿ ಉದ್ಯಮಪತಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಟು ರದ್ದತಿಯಿಂದ ದೇಶಾದ್ಯಂತ ಅನಾನುಕೂಲ ಉಂಟಾಗಿದೆ. ಇದನ್ನು ತಪ್ಪಿಸಲು ಮೋದಿ ನೇತೃತ್ವದ ಸರ್ಕಾರ, ಹಣಕಾಸು ಸಚಿವಾಲಯ ಮತ್ತು ಆರ್‍ಬಿಐ ಅರ್ಹನಿಶಿ ಶ್ರಮಿಸುತ್ತಿದೆ. ಅತಿ ಶೀಘ್ರದಲ್ಲೇ ಈ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಅರುಣ್ ಜೇಟ್ಲಿ ಪುನರುಚ್ಚಿಸಿದರು.  ಇಡೀ ವಿಶ್ವ ಆರ್ಥಿಕ ಅಸ್ಥಿರತೆ ಪರಿಸ್ಥಿತಿಯಲ್ಲಿರುವಾಗ ಭಾರತದಲ್ಲಿ ನೋಟು ರದ್ದತಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಅತ್ಯಂತ ದಿಟ್ಟ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ ಅವರು, ನೋಟು ರದ್ದತಿಯಿಂದ ಆಗಬಹುದಾದ ತಾತ್ಕಾಲಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳುವಲ್ಲಿ ಮೋದಿ ಸಮರ್ಥರಾಗಿದ್ದಾರೆ. ಇದು ದೀರ್ಘಕಾಲ ಭಾರತದ ಆರ್ಥಿಕ ಸುಸ್ಥಿರತೆಗೆ ನೆರವಾಗಲಿದೆ ಎಂದರು.

ಈಗ ನೋಟು ರದ್ದತಿಯಿಂದ ತಾತ್ಕಾಲಿಕ ಆರ್ಥಿಕ ದುರ್ಬಲತೆ ಸೃಷ್ಟಿಯಾಗಿದೆ. ಇದು ಶಾಶ್ವತ ಅಲ್ಲ. ಅತಿ ಶೀಘ್ರದಲ್ಲೇ ಅನಾನುಕೂಲ ಬಗೆಹರಿಯಲಿದೆ. ಭಾರತವು ಪ್ರಗತಿ ಪಥದತ್ತ ದಾಪುಗಾಲು ಹಾಕಲಿದೆ ಎಂದು ಅರುಣ್ ಜೇಟ್ಲಿ ವಿಶ್ಲೇಷಿಸಿದರು.  ಸರಕುಗಳು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ 1ರಿಂದ ಜಿಎಸ್‍ಟಿ ದೇಶಾದ್ಯಂತ ಜಾರಿಗೆ ಬರಬೇಕಿತ್ತು. ಆದರೆ ಪ್ರಸ್ತುತ ಸನ್ನಿವೇಶದಿಂದ ವಿಳಂಬವಾಗಿದೆ. ಏಪ್ರಿಲ್ 1 ಮತ್ತು ಸೆಪ್ಟೆಂಬರ್ 16ರ ನಡುವೆ ಹೊಸ ವ್ಯವಸ್ಥೆ ಜಾರಿಗಾಗಿ ಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಜಾಗತಿಕ ವಿದ್ಯಮಾನಗಳು ಆರ್ಥಿಕ ಸುವ್ಯವಸ್ಥೆಗೆ ಪೂರಕವಾಗಿಲ್ಲ ಮತ್ತು ಸಹಕಾರಿಯಾಗಿಲ್ಲ. ವಿಶ್ವದ ಆರ್ಥಿಕತೆ ಕುಂಠಿತವಾಗುತ್ತಿದೆ. ಇಂಥ ಕ್ಲಿಷ್ಟ ಸನ್ನಿವೇಶದಲ್ಲೇ ನಾವು ಕೈಗೊಂಡಿರುವ ನೋಟು ರದ್ದತಿ ನಿರ್ಧಾರ ಮುಂದಾಲೋಚನೆಯ ದಿಟ್ಟ ಕ್ರಮವಾಗಿದೆ ಎಂದು ಹಣಕಾಸು ಸಚಿವರು ವ್ಯಾಖ್ಯಾನಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin