1 ಕೋಟಿ ರೂ. ಮೌಲ್ಯದ 500 ಕೆಜಿ ಗಾಂಜಾ ವಶ, ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ರಾಜಸ್ತಾನ ಕಡೆಯಿಂದ ಸಿನಿಮೀಯ ಶೈಲಿಯಲ್ಲಿ ಗಾಂಜಾವನ್ನು ಅಕ್ರಮ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಕೆಆರ್ ಪುರಂ ಠಾಣೆ ಪೊಲೀಸರು ಬಂಧಿಸಿ 500 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ತಾನದ ಜೋಧ್‍ಪುರ್ ಜಿಲ್ಲೆಯ ತಾಪೇಡ ಗ್ರಾಮದ ದಯಾಲ್‍ರಾಮ್ (38), ಪೂನಾರಾಮ್ (24), ಬುದ್ಧರಾಮ್ (23) ಬಂಧಿತ ಆರೋಪಿಗಳು. ಇವರಿಂದ ಒಂದು ಕೋಟಿ ರೂ. ಮೌಲ್ಯದ ಗಾಂಜಾ ಮತ್ತು ಟ್ರಕ್‍ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ರಾಜಸ್ತಾನದಲ್ಲಿ ನೋಂದಣಿಯಾಗಿರುವ 10 ಚಕ್ರಗಳ ಟ್ರಕ್‍ನಲ್ಲಿ ದೇವನಹಳ್ಳಿಯಿಂದ ಹೊಸಕೋಟೆ-ಹಳೆ ಮದ್ರಾಸ್ ರಸ್ತೆ ಮೂಲಕ ಕೆಆರ್ ಪುರದ ಮೇಡಹಳ್ಳಿ ಕಡೆಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಮಾಹಿತಿ ಕೆಆರ್ ಪುರಂ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳು ನಂಬಿಕಸ್ತರಲ್ಲದ ಹೊರತು ಬೇರೆಯವರ ಜತೆ ಮಾತನಾಡುವುದಿಲ್ಲ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಿದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆರೋಪಿಗಳ ಜತೆ ಮಾತುಕತೆ ನಡೆಸಿದ್ದರು.

ಹಣ ನೋಡಿ ಖಚಿತಪಡಿಸಿಕೊಳ್ಳದ ಹೊರತು ನಿಮ್ಮೊಂದಿಗೆ ವ್ಯವಹಾರ ಮಾಡುವುದಿಲ್ಲ ಎಂದು ಆರೋಪಿಗಳು ಹೇಳಿ. ಹಣದ ಜತೆ ಟಿನ್‍ಫ್ಯಾಕ್ಟರಿ ಕಡೆ ಬರುವಂತೆ ಸೂಚನೆ ನೀಡಿದ್ದರು. ಹಾಗಾಗಿ ಸೂಟ್‍ಕೇಸ್‍ನಲ್ಲಿ ಹಣ ತೆಗೆದುಕೊಂಡು ಹೋಗಿ ಆರೋಪಿಗಳಿಗೆ ತೋರಿಸಿ ನಂಬಿಕೆ ಮೂಡಿಸಲಾಗಿತ್ತು. ನಂತರ ಆರೋಪಿಗಳು ಟ್ರಕ್‍ನೊಂದಿಗೆ ಮೇಡಹಳ್ಳಿಗೆ ಬಂದರು.

ಅಲ್ಲಿ ಸಾಕ್ಷಿದಾರರ ಸಮಕ್ಷಮದಲ್ಲಿ ದಾಳಿ ಮಾಡಿ ಟ್ರಕ್‍ನ್ನು ವಶಪಡಿಸಿಕೊಂಡು ಶೋಧನೆ ನಡೆಸಿದಾಗ ಗಾಂಜಾ ಅಥವಾ ಮಾದಕ ವಸ್ತು ಸಿಕ್ಕಿರಲಿಲ್ಲ. ಕೂಲಂಕಶವಾಗಿ ವಿಚಾರಣೆ ನಡೆಸಿದಾಗ ಚಾಲಕನ ಕ್ಯಾಬಿನ್ ಹಿಂಭಾಗದಲ್ಲಿ ಒಳಗೆ ಅಂಡರ್‍ಗ್ರೌಂಡ್ ಮಾದರಿಯಲ್ಲಿ ವ್ಯವಸ್ಥಿತವಾದ ಕ್ಯಾಬಿನ್ ಮಾಡಿ ಗಾಂಜಾವನ್ನು ಅಡಗಿಸಿಟ್ಟಿದ್ದರು. 500 ಕೆಜಿಯಷ್ಟು ತೂಕದ ಗಾಂಜಾ ಹಾಗೂ ಟ್ರಕ್ಕನ್ನು ಪೊಲೀಸರು ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆಆರ್ ಪುರ ಠಾಣೆ ಇನ್ಸ್‍ಪೆಕ್ಟರ್ ಅಂಬರೀಶ್, ಸಿಬ್ಬಂದಿಗಳಾದ ಮೂರ್ತಿ, ಬುಡ್ಡೆಗೌಡ, ಚಂದ್ರಪ್ಪ, ನಾರಾಯಣಸ್ವಾಮಿ, ಸಿದ್ದರಾಮ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Facebook Comments