ಮುಚ್ಚುವ ಆತಂಕದಲ್ಲಿ 500ಕ್ಕೂ ಹೆಚ್ಚು ಖಾಸಗಿ ಶಾಲೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23-ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೋರೋನಾ ಮಹಾಮಾರಿಗೆ ಆರ್ಥಿಕ ಚಟುವಟಿಕೆಗಳು ಏರುಪೇರಾಗಿದ್ದು, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಮುಚ್ಚುವ ಆತಂಕದಲ್ಲಿವೆ. ಕೋರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ, ಸರ್ಕಾರ ಈ ಕ್ಷಣದವರೆಗೂ ಶಾಲಾ- ಕಾಲೇಜುಗಳನ್ನು ಆರಂಭಿಸಲು ಖಾಸಗಿಯವರಿಗೆ ಅನುಮತಿ ಕೊಟ್ಟಿಲ್ಲ. ಸದ್ಯ ಆನ್‍ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ನೀಡಲಾಗಿದೆ.

ಪ್ರಸಕ್ತ ವರ್ಷದ ಶುಲ್ಕ ಕಟ್ಟುವಂತೆ ಖಾಸಗಿ ಆಡಳಿತ ಮಂಡಳಿಯವರು ಪೋಷಕರಿಗೆ ಮಾರ್ಚ್ ತಿಂಗಳನಲ್ಲೇ ಸೂಚನೆ ಕೊಟ್ಟಿದ್ದರು. ಶಾಲೆಗಳು ಆರಂಭವಾಗುವ ಬಗ್ಗೆ ಖಾತ್ರಿಇ ಇಲ್ಲದ ಕಾರಣ, ಈವರೆಗೂ ಪೋಷಕರು ಶುಲ್ಕವನ್ನು ಭರಿಸಿಲ್ಲ. ಇದರ ಪರಿಣಾಮ ಆಡಳಿತ ಮಂಡಳಿಗೆ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದ್ದು, ಶಾಲೆಗಳಿಗೆ ಬೀಗ ಹಾಕುವ ಹಂತಕ್ಕೆ ತಲುಪಿದ್ದಾರೆ.

ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಶಾಲೆಗಳು ಶಾಶ್ವತವಾಗಿ ಬೀಗ ಬೀಳುವ ಆತಂಕವನ್ನು ಎದುರಿಸುತ್ತಿವೆ.

ಪೋಷಕರು ಮಕ್ಕಳ ಶುಲ್ಕವನ್ನು ಕಟ್ಟುತ್ತಿಲ್ಲ. ಶಾಲೆಗಳೇ ಆರಂಭವಾಗುವುದು ಅನುಮಾನವಾಗಿರುವಾಗ ನಾವು ಏಕೆ ಶುಲ್ಕ ಕಟ್ಟಬೇಕೆಂದು ಪ್ರಶ್ನಿಸುತ್ತಾರೆ, ಸಿಬ್ಬಂದಿಗಳು ವೇತನ , ಶಾಲಾ ಕಟ್ಟಡಗಳ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚಾಗುತ್ತಿದೆ. ಈ ವರ್ಷ ಈಗಾಗಲೇ ಅರ್ಧ ಶೈಕ್ಷಣಿಕ ಅವ ಮುಗಿದಿದೆ.

ಪೋಷಕರು ಶುಲ್ಕ ಕಟ್ಟಲು ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರವು ಶಾಲೆಗಳನ್ನು ತೆರೆಯುವ ಖಚಿತತೆ ಇಲ್ಲ. ನಮಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲವಾದ ಕಾರಣ 500ಕ್ಕೂ ಹೆಚ್ಚು ಶಾಲೆಗಳು ಬೀಗ ಹಾಕುವ ಸ್ಥಿತಿಗೆ ಬಂದಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ನೌಕರರೊಬ್ಬರು ತಿಳಿಸಿದ್ದಾರೆ.

ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು 500 ಶಾಲೆಗಳಿಗೆ ಯಾವುದೇ ಕ್ಷಣದಲ್ಲಿ ಬೀಗ ಬೀಳಲಿದ್ದು, ಇದನ್ನೇ ನಂಬಿದ್ದ ಸಾವಿರಾರು ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಶಾಲೆಗಳು ಆರಂಭವಾಗದಿದ್ದರೆ ಸಿಬ್ಬಂದಿಗೆ ವೇತನ ನೀಡುವುದು ಅಷ್ಟು ಸುಲಭವಲ್ಲ. ನಾವು ಆನ್‍ಲೈನ್ ತರಗತಿಗಳನ್ನು ನಡೆಸಿಯೂ ವೇತನ ನೀಡಿದ್ದೇವೆ. ಆದರೆ ಈಗ ನಮ್ಮಿಂದ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಶುಲ್ಕವೇ ಇಲ್ಲದಿದ್ದರೆ ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಶಾಲೆಗಳಿಗೆ ಬೀಗ ಹಾಕಬೇಕಾದ ಅನಿವಾರ್ಯತೆ ಇದೆ. ಒಂದು ಕಡೆ ಸಿಬ್ಬಂದಿ ವೇತನ ನೀಡದಿದ್ದರೆ ಸುಮ್ಮನಿರುವುದಿಲ್ಲ. ಮತ್ತೊಂದು ಕಡೆ ಬಹುತೇಕ ಶಾಲೆಗಳು ಖಾಸಗಿ ಕಟ್ಟಡಗಳಲ್ಲಿವೆ.

ಸಕಾಲಕ್ಕೆ ಸರಿಯಾಗಿ ಬಾಡಿಗೆ ಕಟ್ಟದಿದ್ದರೂ ಕಟ್ಟಡ ಮಾಲೀಕರು ಸುಮ್ಮನೆ ಇರುವುದಿಲ್ಲ. ಎರಡನ್ನೂ ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ಶಾಲೆಗಳಿಗೆ ಬೀಗ ಹಾಕಲೇಬೇಕಾದ ಸಂದಿಗ್ಧ ಸ್ಥಿತಿ ಇದೆ ಎಂದು ಖಾಸಗಿ ಆಡಳಿತ ಮಂಡಳಿ ತಮ್ಮ ನೋವು ಹೊರಹಾಕಿಕೊಂಡಿದೆ.

Facebook Comments

Sri Raghav

Admin