ಪ್ರಧಾನಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯಕ್ಕೆ 5612 ಕಿ.ಮೀ ರಸ್ತೆ ಹಂಚಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಕೇಂದ್ರ ಸರ್ಕಾರ ಮುಖ್ಯ ರಸ್ತೆ ಪ್ರಮುಖ ಗ್ರಾಮೀಣ ಭಾಗದ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ರಾಜ್ಯಕ್ಕೆ 5612.50 ಕಿ.ಮೀ ರಸ್ತೆ ಹಂಚಿಕೆ ಮಾಡಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಹಂಚಿಕೆಯಾಗಿರುವ 5612.50 ಕಿ.ಮೀ ರಸ್ತೆಗೆ ಕೇಂದ್ರ ಶೇ.60ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನವನ್ನು ನೀಡಲಿದೆ ಎಂದು ತಿಳಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 445ರಷ್ಟು ರಸ್ತೆ ಕಾಮಗಾರಿಗಳ 26 ಉದ್ದ ಸೇತುವೆಗಳನ್ನು ಒಳಗೊಂಡಂತೆ 3226.21 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು 2729.66 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡು ಪ್ರಗತಿಯಲ್ಲಿವೆ. ಉಳಿದ 2410.93 ಉದ್ದದ ರಸ್ತೆ ಕಾಮಗಾರಿಗಳಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಅನುಮೋದನೆ ನಿರೀಕ್ಷೆ ಇದೆ ಎಂದರು.

ನಿರೀಕ್ಷೆಗೂ ಮೀರಿದ ಸಾಧನೆ: ಮಹಾತ್ವಾಕಾಂಕ್ಷಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಈವರೆಗೂ 9.32 ಕೋಟಿ ಮಾನವ ದಿನಗಳನ್ನು ಸೃಜನ ಮಾಡುವ ಮೂಲಕ ಶೇ.72.68 ಲಕ್ಷ ಗುರಿ ಸಾಧನೆ ಮಾಡಲಾಗಿತ್ತು ಎಂದು ಈಶ್ವರಪ್ಪ ಪ್ರಶಂಸಿಸಿದರು.

ಪ್ರಸಕ್ತ ಸಾಲಿನಲ್ಲಿ ಕೂಲಿಗಾಗಿ 2499. 18 ಕೋಟಿ ಮತ್ತು ಸಾಮಗ್ರಿಗಳಿಗಾಗಿ 609.65 ಕೋಟಿ ಸೇರಿದಂತೆ ಒಟ್ಟು 3,155.05 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಸಕ್ತ ವರ್ಷದಲ್ಲಿ 44.86 ಲಕ್ಷ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದ್ದು , ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚಿನ ಸಾಧನೆಯಾಗಿದೆ. ಪ್ರಸಕ್ತ ವರ್ಷದಲ್ಲಿ 8.3 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿದೆ. ಎಸ್ಸಿ, ಎಸ್ಟಿ ಮತ್ತು ಮಹಿಳೆಯರು ಕೂಡ ಈ ಯೋಜನೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದು ಕಳೆದ ಐದು ವರ್ಷಗಳಲ್ಲೇ ದಾಖಲೆಯಾಗಿದೆ ಎಂದರು.

ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಕಂದಕ, ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ , ಬಚ್ಚಲು ಗುಂಡಿ, ರಸ್ತೆ ಬದಿ ನೀರು ತೋಪು , ಬ್ಲಾಕ್ ಪ್ಲಾಂಟೇಷನ್ ಕಾಮಗಾರಿ ಕೈಗೊಳ್ಳಲಾಗಿದೆ.

ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಶೇ.65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗೆ ಶೇ.60ರಷ್ಟು ಕೃಷಿ ಮತ್ತು ಕೃಷಿ ಸಂಬಂತ ಚಟುವಟಿಕೆಗಳಿಗೆ ಕಡ್ಡಾಯಗೊಳಿಸಿದೆ ಎಂದು ಈಶ್ವರಪ್ಪ ವಿವರಿಸಿದರು.

ರಾಜ್ಯದಲ್ಲೂ ಅನುಷ್ಠಾನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಾಮಿತ್ವ ಯೋಜನೆಯನ್ನು ಸರ್ವೆ ಆಫ್ ಇಂಡಿಯಾ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗಿದೆ. ಈಗಾಗಲೇ ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಗೋಪಹಳ್ಳಿ ಗ್ರಾಪಂ ಎಂ.ಜಿ.ಪಾಳ್ಯ ಮತ್ತು ಮಾಗಡಿ ಕಸಬಾ ಹೋಬಳಿಯ ಕಿಲಾರಿ ಕಾವಲ್ ಗ್ರಾಪಂನ ಬಸವಾ ಪಟ್ಟಣದಲ್ಲಿ ಆಸ್ತಿ ಕಾರ್ಡ್‍ಗಳನ್ನು ಫಲಾನುಭವಿಗಳಿಗೆ ಬಹುತೇಕವಾಗಿ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಇದರ ಮುಂದುವರೆದ ಭಾಗವಾಗಿ ರಾಮನಗರ, ಮೈಸೂರು, ಹಾಸನ, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ 10 ಗ್ರಾಮ ಪಂಚಾಯ್ತಿಗಳಲ್ಲಿನ ಎಲ್ಲಾ 83 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿ 763 ಆಸ್ತಿ ಮಾಲೀಕರಿಗೆ ಆಸ್ತಿ ಕಾರ್ಡ್ ವಿತರಿಸಲಾಗಿದೆ.

ಮೊದಲ ಹಂತದಲ್ಲಿ ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ , ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು , ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ.

2021ರ ಮಾರ್ಚ್ ಅಂತ್ಯಕ್ಕೆ ಒಟ್ಟು 16,600 ಗ್ರಾಮಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದ್ದು , ಎರಡನೆ ಹಂತದಲ್ಲಿ 14 ಜಿಲ್ಲೆಗಳಲ್ಲಿ 2021ರ ಏಪ್ರಿಲ್ ನಂತರ ಅನುಷ್ಠಾನ ಮಾಡಲಾಗುವುದು. ಗ್ರಾಮೀಣ ಜನವಸತಿ ಪ್ರದೇಶಗಳ ಆಸ್ತಿ ಗುರುತಿಸಲು 12 ಡ್ರೋಣ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ಈಶ್ವರಪ್ಪ ಮಾಹಿತಿ ನೀಡಿದರು.

Facebook Comments

Sri Raghav

Admin