ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ವ್ಯವಸ್ಥಿತ ಜಾಲ ಪತ್ತೆ, 6 ಜೈಷ್ ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.1- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಉಪಟಳ ಹೆಚ್ಚಾಗುತ್ತಿದ್ದು, ಭಯೋತ್ಪಾದಕರ ವ್ಯವಸ್ಥಿತ ಸಂಪರ್ಕ ಜಾಲವೊಂದನ್ನು (ನಾರ್ಕೊ ಟೆರ್ರರ್ ಮಾಡ್ಯೂಲ್) ಭದ್ರತಾ ಪಡೆಗಳು ಭೇದಿಸುವಲ್ಲಿ ಯಶಸ್ವಿಯಾಗಿವೆ. ಉಗ್ರರು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆದಾರರ ಜೊತೆ ಈ ಜಾಲವು ನಿಕಟ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.

ಈ ಸಂಬಂಧ ಪಾಕಿಸ್ತಾನ ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್(ಜೆಇಎಂ)ನ ಆರು ಉಗ್ರರನ್ನು ಯೋಧರು ಮತ್ತು ಪೊಲೀಸರು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ಹಾಗೂ ನಗದು ವಶಪಡಿಸಿಕೊಂಡಿದ್ಧಾರೆ.

ಉಗ್ರರ ಹಾವಳಿ ತೀವ್ರಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯ ಚಾಂದೂರಾ ಪ್ರದೇಶದಲ್ಲಿ ಸೇನೆ, ಸಿಆರ್‍ಪಿಎಫ್ ಮತ್ತು ಪೊಲೀಸರ ಜಂಟಿ ತಂಡ ಖಚಿತ ಮಾಹಿತಿ ಮೇರೆಗೆ ಪಾಕ್ ಬೆಂಬಲಿತ ಉಗ್ರರ ಸಂಪರ್ಕ ಜಾಲವನ್ನು ಪತ್ತೆ ಮಾಡಿದೆ.

ಬಂಧಿತರನ್ನು ಮುದಾಸ್ಸೀರ್ ಫಯಾಜ್, ಶಬೀರ್ ಗನೈ, ಸಗೀರ್ ಅಹಮದ್ ಪೊಸ್ವಾಲ್, ಇಶಾಕ್ ಭಟ್, ಅರ್ಷಿದ್ ಥೋಕೆರ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಬಂಧಿತ ಅಪ್ರಾಪ್ತನಾಗಿದ್ದು, ಅತಣ ಗುರುತು ಬಹಿರಂಗಗೊಳಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರೆಲ್ಲರೂ ಪಾಕಿಸ್ತಾನದ ಜೈಷ್ ಉಗ್ರಗಾಮಿ ಸಂಘಟನೆಯ ಕಮಾಂಡರ್‍ಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮಾದಕ ವಸ್ತು, ಶಸ್ತ್ರಾಸ್ತ್ರ ಕಳ್ಳಸಾಗಣೆ, ಜೆಇಎಂ ಉಗ್ರರಿಗೆ ಹಣಕಾಸು ನೆರವು ಮತ್ತು ಇತರ ಮಾಹಿತಿಗಳನ್ನು ನೀಡುತ್ತಿದ್ದರು.

ಬಂಧಿತರಿಂದ ಎ.ಕೆ-47, ಎಕೆ-56 ರೈಫಲ್‍ಗಳು, ಚೀನಾದ ಪಿಸ್ತೂಲ್‍ಗಳು, ಹ್ಯಾಂಡ್ ಗ್ರೇನೆಡ್‍ಗಳು, 1,55 ಲಕ್ಷ ನಗದು, 1 ಕೆಜಿ ಹೆರಾಯಿನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಉಗ್ರರು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆದಾರರ ಜೊತೆ ನಿಕಟ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.

Facebook Comments