ಒಂದೇ ದಿನ ಸಿಡಿಲಿಗೆ 6 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀದರ್/ವಿಜಯಪುರ/ದಾವಣಗೆರೆ,ಮೇ 22- ಉತ್ತರ ಕರ್ನಾಟಕ ಭಾಗದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಅನಾಹುತಗಳನ್ನು ಸೃಷ್ಠಿಸಿದೆ.

ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನಕ್ಕೆ ಮಳೆ ಒಂದೆಡೆ ತಂಪನೆರೆದರೆ, ಹಲವೆಡೆ ಮರಗಳು ಉರುಳಿ, ಮನೆಗಳು ಜಖಂಗೊಂಡು, ಬೆಳೆದ ಬೆಳೆಗಳು ಹಾಳಾಗಿ ದನ-ಕರು ಕುರಿ ಮತ್ತಿತರ ಪ್ರಾಣಿಗಳು ಬಲಿಯಾಗಿರುವುದರಿಂದ ರೈತಾಪಿ ವರ್ಗ ಕಂಗಾಲಾಗಿದೆ.

ಬೀದರ್‍ನಲ್ಲಿ ರೈತ, ಯುವತಿ ಸೇರಿದಂತೆ ನಿನ್ನೆ ಸುರಿದ ಗುಡುಗು ಸಹಿತ ಮಳೆಗೆ 6 ಜನ ಬಲಿಯಾಗಿದ್ದಾರೆ. 44 ಡಿಗ್ರಿ ಸೆಲ್ಸಿಯಸ್‍ಗಿಂತಲೂ ಹೆಚ್ಚು ಬಿಸಿಲಿನಿಂದ ತತ್ತರಿಸುತ್ತಿದ್ದ ಕಲಬುರಗಿ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ.

ಯುವತಿ ಭಾಗ್ಯಶ್ರೀ ಎಂಬುವವರು ಸಿಡಿಲಿಗೆ ಬಲಿಯಾದ ದುರ್ದೈವಿ. ಭಾಲ್ಕಿ ತಾಲೂಕಿನ ಮೊರಂಬಿ ಗ್ರಾಮದ ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾಲ್ಕಿ ತಾಲೂಕಿನ ತಳವಾಡ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಾದಪ್ಪ(55) ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಒಂದು ಎತ್ತು ಕೂಡ ಸಾವನ್ನಪ್ಪಿದೆ. ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾದಗಿರಿಯಲ್ಲಿ ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿದ್ದಾರೆ.

ತಾಲೂಕಿನ ಮಾದ್ವಾರ ಗ್ರಾಮದ ಶೇಖರ್ ಹಾಗೂ ಅಶೋಕ್ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದು, ಇನ್ನೋರ್ವನಿಗೆ ತೀವ್ರ ಗಾಯವಾಗಿದ್ದು ಸೈದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿತ್ತಾಪುರ, ಜೇವರ್ಗಿ ತಾಲೂಕು ಸೇರಿದಂತೆ ವರುಣನ ಆರ್ಭಟಕ್ಕೆ ಮನೆಯ ಮೇಲಿದ್ದ ಸಿಂಟೆಕ್ಸ್ ಟ್ಯಾಂಕ್‍ಗಳು ಹಾರಿ ಹೋಗಿವೆ. ಗಾಳಿಯ ರಭಸಕ್ಕೆ ರಸ್ತೆಯ ಮೇಲೆ ತೆರಳುತ್ತಿದ್ದು ಬೈಕ್ ಸವಾರನಿಗೆ ಅಪ್ಪಳಿಸಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.

ವಿಜಯಪುರದಲ್ಲಿ ಬಿರುಗಾಳಿ ಮಳೆಗೆ ದೊಡ್ಡ ಆಲದ ಮರವೊಂದು ಉರುಳಿಬಿದ್ದ ಪರಿಣಾಮ ಅದರ ಕೆಳಗಿದ್ದ ಎರಡು ಕುದುರೆ, ಐದು ಕುರಿ ಸಾವನ್ನಪ್ಪಿವೆ. ಆಲದ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿಗಳಿಗೆ ಸೇರಿದ್ದ ಈ ಕುದುರೆ ಹಾಗೂ ಕುರಿಗಳು ಅಸು ನೀಗಿರುವುದಲ್ಲದೇ ಓರ್ವ ಯುವಕ, ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಐನಾಪುರ ಗ್ರಾಮದಲ್ಲಿ ಬಾಳೆತೋಟ ನಾಶವಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ ಗ್ರಾಮದಲ್ಲಿ ಮಳೆಯ ಅವಾಂತರಕ್ಕೆ ಹಲವು ಮನೆಗಳು ಜಖಂಗೊಂಡಿವೆ. ದಾವಣಗೆರೆಯಲ್ಲಿ ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆಗೆ ಗದ್ದೆಯಲ್ಲಿ ಬೆಳೆದು ನಿಂತ ಭತ್ತ ನೆಲಕಚ್ಚಿದೆ. ಕಟಾವಿಗೆ ಬಂದ ಭತ್ತದ ಬೆಳೆ ಮಳೆ ಹಾನಿಗೆ ಮಣ್ಣು ಪಾಲಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಹತ್ತಕ್ಕೂ ಹೆಚ್ಚು ಕಡೆ ಮರಗಳು ಉರುಳಿಬಿದ್ದು 60 ಹೆಚ್ಚು ಮನೆಗಳು ಜಖಂಗೊಂಡಿರುವುದು ವರದಿಯಾಗಿದೆ. ಹರಿಹರ ತಾಲೂಕಿನ ಬನ್ನಿಕೋಡು, ಬೇವಿನಳ್ಳಿ, ಬಳ್ಳಾರಿ ಜಿಲ್ಲೆಯ ಹರಪ್ಪನ ಹಳ್ಳಿ ತಾಲೂಕಿನ ಹುಚ್ಚಂಗಿ ದುರ್ಗ, ಬಾಗಳಿ ಗ್ರಾಮಗಳಲ್ಲಿ ಭಾರೀ ಹಾನಿಯುಂಟಾಗಿದೆ. ಮರ ತೆರವುಗೊಳಿಸದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.

ಜಿಲ್ಲೆಯಲ್ಲಿ ಗುಡುಗು-ಸಿಡಿಲು ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಬೆಳೆಗಳು ನಾಶವಾಗಿದ್ದು, ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಸಿಡಿಲು ಬಡಿದು ಜಗಳೂರು ತಾಲೂಕಿನ ಹಲಗೂರು ಗೊಲ್ಲರ ಹಟ್ಟಿ ಗ್ರಾಮದ ಚಂದ್ರಣ್ಣ (52) ಮೃತಪಟ್ಟ ರೈತ. ನಂದಿದೇವೂರು ಗ್ರಾಮದಲ್ಲಿ ಭಾರೀ ಬಿರುಗಾಳಿಗೆ ಮನೆಯೊಂದರ ಮೇಲ್ಛಾವಣಿ ಹಾರಿ ಹೋಗಿದೆ.

ಜಿಲ್ಲೆಯ ಹರಿಹರ ತಾಲೂಕಿನ ಹರಳಹಳ್ಳಿ, ಹಾಲಿವಾಹನ, ಬನ್ನಿಕೊಡು, ನಿಟ್ಟೂರು, ಕುಂಬಳೂರು, ಹೊನ್ನಾಳಿ ತಾಲೂಕಿನ ಕುಂದೂರು, ಪೂಲಂಗಿ, ದಾವಣಗೆರೆ ತಾಲೂಕಿನ ಶಿರಮಗನಗೊಂಡನಹಳ್ಳಿ, ಶ್ಯಾಮನೂರು, ಕುಂದವಾಡ, ಆವರಹಳ್ಳಿ ಸೇರಿದಂತೆ ಇತರೆ ಭಾಗದಲ್ಲಿ ಆಲಿಕಲ್ಲಿ ಮಳೆ ಸುರಿದು ರೈತರು ಬೆಳೆದ ಬೆಳೆಗಳು ನಾಶಗೊಂಡಿದೆ.

ಸುದ್ದಿ ತಿಳಿದು ಜಗಳೂರು ತಹಶೀಲ್ದಾರ್ ತಿಮ್ಮಣ್ಣ ಹುಲ್ಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸಾಂತ್ವನ ಹೇಳಿದ್ದು, ಸರ್ಕಾರದಿಂದ ಸಿಗುವ ಪರಿಹಾರವನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಟಾವಿಗೆ ಬಂದಂತಹ ಭತ್ತ ಹಾಗೂ ಮಾವು ಸೇರಿದಂತೆ ವಿವಿಧ ಬೆಳೆಗಳು ತೋಟದ ಬೆಳೆಗಳು ಮಳೆಗೆ ನೆಲಕಚ್ಚಿದ್ದು ರೈತರು ಕಂಗಾಲಾಗಿದ್ದಾರೆ.

ಹರಿಹರ ತಾಲೂಕು ಹರಳಹಳ್ಳಿ ಗ್ರಾಮದ ವಾಸುದೇವ ಚಾರಿ ಎಂಬ ರೈತನಿಗೆ ಸೇರಿದ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ, ರೈತ ಮಂಜುನಾಥ್ ಹಾಲಿ ವಾಹನದ ಹನುಮಂತಪ್ಪ, ಗುಡ್ಡಪ್ಪ ಸೇರಿದಂತೆ ಇನ್ನಿತರು ಬೆಳೆದಂತಹ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ಮುಂದೇನು ಎಂಬುವುದು ತೋಚದಂತಾಗಿದೆ ಎಂದು ಕಣ್ಣೀರು ಹಾಕಿದರು. ಹಲವು ಕಡೆ ಮರಗಳು ಕಾರು ಇನ್ನಿತರ ವಾಹನಗಳ ಮೇಲೆ ಬಿದ್ದು ವಾಹನಗಳು ಜಖಂ ಗೊಂಡಿವೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ