6 ಲಕ್ಷ ಸುಪಾರಿ ಪಡೆದು ಕೊಲೆ ಮಾಡಿ ನಾಟಕವಾಡಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಕುಟುಂಬದವರಿಂದಲೇ ಆರು ಲಕ್ಷ ರೂ.ಗೆ ಸುಪಾರಿ ಪಡೆದು ವಾಹನ ಚಲಾಯಿಸಿ ವ್ಯಾಪಾರಿಯನ್ನು ಸಾಯಿಸಿ ಅಪಘಾತವೆಂಬಂತೆ ಬಿಂಬಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವೈಟ್‍ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್‍ಕುಮಾರ್ ಬಂಧಿತ ಆರೋಪಿ.  ಜನವರಿ 21ರಂದು ರಾತ್ರಿ9.15ರ ಸುಮಾರಿನಲ್ಲಿ ಗುಂಜೂರು ನಿವಾಸಿ ಜಿ.ಎಸ್.ದೇವರಾಜ್ ಎಂಬುವರು ವೈಟ್‍ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ತಂದೆ ಸುಬ್ಬರಾಯಪ್ಪ (58) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ದೂರು ನೀಡಿದ್ದಾರೆ.

ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಸುಬ್ಬರಾಯಪ್ಪ ಅವರು ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪರಿಚಿತ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಅಪಘಾತ ನಡೆದ ಸ್ಥಳದ ಪರಿಶೀಲನೆಯಿಂದ ಅಪಘಾತವಾಗಿರುವ ರಸ್ತೆಯಲ್ಲಿ ರಸ್ತೆ ಉಬ್ಬುಗಳು ಇದ್ದು, ಅಲ್ಲಿ ಅಪಘಾತವಾಗುವ ಸಂಭವ ಬಹಳ ಕಡಿಮೆ ಎಂಬುದು ಗೊತ್ತಾಗಿದೆ.

ಬಳಿಕ ಪೊಲೀಸರು ಸ್ಥಳೀಯರು ಹಾಗೂ ಮೃತರ ಸಂಬಂಧಿಕರ ಹೇಳಿಕೆಗಳನ್ನು ಪಡೆದು ಪರಿಶೀಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡ ವೇಳೆ ಸಂಬಂಧಿಕರು ನೀಡುತ್ತಿದ್ದ ಅಸ್ಪಷ್ಟ ಸಂಶಯಾಸ್ಪದ ಹೇಳಿಕೆಗಳಿಂದ ಈ ಪ್ರಕರಣವು ಅಪಘಾತದಿಂದ ಆಗಿರದೆ ಕೊಲೆಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ತಂಡ ರಚನೆ: ಅಪಘಾತ ಮಾಡಿದ ಅಪರಿಚಿತ ವಾಹನ ಹಾಗೂ ಸವಾರನನ್ನು ಪತ್ತೆಹಚ್ಚಲು ವೈಟ್‍ಫೀಲ್ಡ್ ಸಂಚಾರಿ ಠಾಣೆಯ ಒಂಬತ್ತು ಅಧಿಕಾರಿ ಹಾಗೂ ಸಿಬ್ಬಂದಿ ತಂಡ ರಚಿಸಿ ತನಿಖೆ ಕೈಗೊಂಡಿತ್ತು. ನಗರದಲ್ಲಿ ಅಪರಾಧಗಳನ್ನು ತಡೆಗಟ್ಟುವ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನುಅಳವಡಿಸಲಾಗಿದ್ದು, ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇಲ್ಲದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿ ಸ್ಥಳದ ಸಮೀಪವಿರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸಿದಾಗ ನಂಬರ್ ಇಲ್ಲದ ರೇವಾ ಕಾರ್ಸ್ ಸೆಲ್ಫ್ ಡ್ರೈವಿಂಗ್ ಕಂಪೆನಿಗೆ ಸೇರಿದ ಮಹೀಂದ್ರ ಸ್ಕಾರ್ಪಿಯೋ ವಾಹನ ಅತಿವೇಗವಾಗಿ ಹಾದು ಹೋಗಿರುವುದು ಕಂಡುಬಂದಿದೆ.

ತನಿಖೆ ವೇಳೆ ಸುಬ್ಬರಾಯಪ್ಪ ಅವರಿಗೆ ಅವರೇಕಾಳು ವ್ಯಾಪಾರದ ಸಂಬಂಧ ವ್ಯಕ್ತಿಯೊಬ್ಬರು ಮೊಬೈಲ್‍ಗೆ ಕರೆ ಮಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಮೃತರ ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಕೊನೆಗೆ ಬಂದಿರುವ ಕರೆಯ ನಂಬರ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ.

ರೇವಾ ಕಂಪೆನಿಯವರನ್ನು ಸಂಪರ್ಕಿಸಿ ಪೊಲೀಸರು ವಿವರಗಳನ್ನು ಪಡೆದಾಗ ಅವರಲ್ಲಿ ಲಭ್ಯವಿದ್ದ ವಾಹನಗಳ ಜಿಪಿಎಸ್ ಚಲನ-ವಲನಗಳ ಆಧಾರದ ಮೇಲೆ ಅವರ ಕಂಪೆನಿಯ ಮಹೀಂದ್ರ ಸ್ಕಾರ್ಪಿಯೋ ವಾಹನವು ಅಪಘಾತ ನಡೆದ ಸ್ಥಳದಿಂದ ಹಾದುಹೋಗಿರುವುದು ಕಂಡುಬಂದಿದೆ. ಈ ಪ್ರಕರಣವು ಕೇವಲ ಮಾರಣಾಂತಿಕ ಅಪಘಾತವಾಗಿರದೆ ಪೂರ್ವ ನಿಯೋಜಿತ ಅಪಘಾತವೆಂದು ಅನುಮಾನಗೊಂಡು ಸ್ಕಾರ್ಪಿಯೋ ವಾಹನವನ್ನು ಬಾಡಿಗೆಗೆ ಪಡೆದಿದ್ದ ಹಾಗೂ ಮೃತರಿಗೆ ಕೊನೆಯ ಕರೆ ಮಾಡಿದ ಗ್ರಾಹಕ ಅನಿಲ್ ಕುಮಾರ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಅನಿಲ್‍ಕುಮಾರ್ ಪೊಲೀಸರ ಮುಂದೆ ಸತ್ಯಾಂಶ ಬಾಯಿ ಬಿಟ್ಟಿದ್ದು, ಸುಬ್ಬರಾಯಪ್ಪ ಅವರನ್ನು ಕೊಲೆ ಮಾಡಲು ಅವರ ಕುಟುಂಬದವರೇ 6 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರೆಂದು ಹೇಳಿದ್ದಾನೆ. ಮೃತರ ಪತ್ನಿ ಯಶೋಧಮ್ಮ ಹಾಗೂ ಮಕ್ಕಳಾದ ಭರತ್, ದೇವರಾಜ್‍ರೊಂದಿಗೆ ಸೇರಿಕೊಂಡು ತನ್ನ ಸ್ನೇಹಿತರಾದ ಸುನೀಲ್‍ಕುಮಾರ್, ನಾಗೇಶ್ ಹಾಗೂ ಧನುಶ್ ಎಂಬುವವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದು ಈ ಕೊಲೆಗೆ ಒಬ್ಬ ವಕೀಲರು ಯೋಚನೆ ರೂಪಿಸಿಕೊಟ್ಟಿರುವುದಾಗಿ ತಿಳಿಸಿದ್ದಾನೆ.

ಇದುವರೆಗೂ 4.40 ಲಕ್ಷ ರೂ. ಪಡೆದುಕೊಂಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿ ಅಪಘಾತ ಮಾಡಿದ ಬಳಿಕ ಸದರಿ ಸ್ಕಾರ್ಪಿಯೋ ಕಾರನ್ನು ಮುಳಬಾಗಿಲು ತಾಲೂಕಿನ ತಂಬಳ್ಳಿ ಬಳಿ ಇರುವ ಇಂಪ್ತಿಯಾಜ್ ಗ್ಯಾರೇಜ್‍ನಲ್ಲಿ 57 ಸಾವಿರ ರೂ.ಗಳಿಗೆ ದುರಸ್ತಿ ಮಾಡಿಸಿರುವುದು ತಿಳಿದುಬಂದಿದೆ. ಆರೋಪಿಯ ಹೇಳಿಕೆ ಹಾಗೂ ತನಿಖೆ ವೇಳೆಯಲ್ಲಿ ಕಂಡುಬಂದ ಸಾಕ್ಷ್ಯಾಧಾರಗಳಿಂದ ಈ ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ನ್ಯಾಯಾಲಯದಿಂದ ಈ ಪ್ರಕರಣದ ತನಿಖೆಯನ್ನು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವೈಟ್‍ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣೆಗೆ ಸದರಿ ಪ್ರಕರಣವನ್ನು ಮುಂದಿನ ತನಿಖೆಗಾಗಿ ಹಸ್ತಾಂತರಿಸಲು ನ್ಯಾಯಾಲಯವು ಆದೇಶಿಸಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಅವರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments