ಶಾಕಿಂಗ್ ನ್ಯೂಸ್: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮನೆಯಲ್ಲೇ 600 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15- ಸಮಯಕ್ಕೆ ಸರಿಯಾಗಿ ಸಿಗದ ಬೆಡ್, ಚಿಕಿತ್ಸೆ ವಿಳಂಬದಿಂದಾಗಿ ಕಳೆದ 1 ತಿಂಗಳಿಂದ ರಾಜ್ಯದಲ್ಲಿ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬ‌ ಆಘಾತಕಾರಿ ಸುದ್ದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಇಲಾಖೆಯಿಂದ ಹೊರಬಿದ್ದಿದೆ.

ಏಪ್ರಿಲ್ 13 ರಿಂದ 30ರವರೆಗೆ ಸುಮಾರು 120 ಇದ್ದ ಸಾವಿನ ಸಂಖ್ಯೆ ಮೇ 1 ರಿಂದ ಮೇ 13ರವರೆಗೆ ಇದ್ದಕ್ಕಿದ್ದಂತೆ 479ಕ್ಕೇರಿದೆ, ಮೇ 12 ರಂದು ಅತಿ ಹೆಚ್ಚು ಸಾವು ದಾಖಲಾಗಿದ್ದು, ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ 88 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯೇ ಬಹಿರಂಗಪಡಿಸಿದೆ.

ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಹುಡುಕಾಟ, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಕೋವಿಡ್ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ಸರಿಯಾಗಿ ಬೆಡ್ ವ್ಯವಸ್ಥೆ ಆಕ್ಸಿಜನ್, ಹಾಗೂ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಈ ಸಾವುಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಸಿಗೆ ಕೊರತೆ ಹಿನ್ನೆಲೆಯಲ್ಲಿ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾಗಲಿಲ್ಲ, ಇದರ ಜೊತೆಗೆ ರೂಪಾಂತರಿ ವೈರಸ್ ನಿಂದಾಗಿ ಸಾವಿನ ಸಂಖ್ಯೆ ದುಪ್ಪಟ್ಟಾಗಿದೆ, ಈ ಮೊದಲು ರೋಗದ ತೀವ್ರತೆ ಹೆಚ್ಚಾಗಲು ಆರರಿಂದ 8 ದಿನ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಕೇವಲ ಮೂರರಿಂದ ನಾಲ್ಕು ದಿನಗಳಲ್ಲೇ ಸೋಂಕು ತೀವ್ರವಾಗುತ್ತಿದೆ. ನ್ಯುಮೋನಿಯಾ, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೇ ಸಾವಿನ ಪ್ರಮಾಣ ತಗ್ಗಲಿದೆ ಎಂದು ಹೇಳಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ಬೆಡ್ ಸಿಗುತ್ತಿಲ್ಲ.ಹೀಗಾಗಿ ಇಂತಹ ಅವಘಡಗಳು ಸಂಭವಿಸಿವೆ‌ ಎಂದು ತಿಳಿಸಿದ್ದಾರೆ.

ಕೆಲವು ರೋಗಿಗಳಿಗೆ 2-3 ದಿನಗಳವರೆಗೆ ಐಸಿಯು ಹಾಸಿಗೆ ಸಿಗುತ್ತಿಲ್ಲ, ಆಮ್ಲಜನಕದ ಶುದ್ಧತ್ವ ಮಟ್ಟ ಕಡಿಮೆ ಮತ್ತು ಉಸಿರಾಟದ ತೊಂದರೆಯಿಂದಾಗಿ ಅವರು ಬಳಲುತ್ತಾರೆ, ಇದು ರೋಗಿಗಳಿಗೆ ಸಾಕಷ್ಟು ಆಘಾತವನ್ನುಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರು ಮನೆಯಲ್ಲಿ ಹೃದಯಾಘಾತಕ್ಕೊಳಗಾಗುತ್ತಾರೆ. ಈ ಮೊದಲು ಮನೆಯಲ್ಲೇ ಆರೈಕೆ ಸೇವೆಗಾಗಿ ವೈದ್ಯರನ್ನು ರೋಗಿಯ ಮನೆಗೆ ಕಳುಹಿಸಲಾಗುತ್ತಿತ್ತು, ಆದರೆ ಅದು ಈಗ ಲಭ್ಯವಿಲ್ಲ “ಎಂದು ಮಾಹಿತಿ ನೀಡಿದ್ದಾರೆ.

ರೋಗದ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸದಿರುವುದು, ರೋಗಿಗಳ ಸಂಬಂಧಿಕರ ನಿರ್ಲಕ್ಷ್ಯ ವರ್ತನೆಯಿಂದ ಚಿಕಿತ್ಸೆ ವಿಳಂಬವಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ .ಮೇ ತಿಂಗಳಲ್ಲಿ ಮನೆಯಲ್ಲಿ ಸಾವು ಏಕೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಈ ಮೊದಲು ನನಗೆ ಪ್ರತಿದಿನ 5-10 ಕರೆ ಬೆಡ್ ಕೇಳಿ ಬರುತ್ತಿದ್ದವು, ಆದರೆ ಈಗ ಅದರ ಸಂಖ್ಯೆ ಇಳಿದಿದ್ದು, ಕೇವಲ 1 ಮತ್ತು 2 ಕರೆಗಳು ಬರುತ್ತಿವೆ. ಕೇಂದ್ರ ಬೆಡ್ ನಿರ್ವಹಣೆ ವ್ಯವಸ್ಥೆಯಿಂದ ಇಳಿಮುಖವಾಗಿದೆ ಎಂದು ಹೇಳಿದ್ದಾರೆ.

Facebook Comments