ದಾಖಲೆಗಳಿಲ್ಲದ 60 ಕೆಜಿ ಚಿನ್ನಾಭರಣ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27-ಯಾವುದೇ ದಾಖಲೆ, ಬಿಲ್ಲುಗಳಿಲ್ಲದೆ ವಹಿವಾಟಿಗಾಗಿ ಸಂಗ್ರಹಿಸಿದ್ದ 60 ಕೆಜಿ ಮೌಲ್ಯದ ಚಿನ್ನಾಭರಣಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಚಿಕ್ಕಪೇಟೆಯ ರಂಗನಾಥ ಮಾನ್ಸನ್ ಹಾಗೂ ಸಕಲಾಜಿ ಮಾರ್ಕೆಟ್‍ನಲ್ಲಿರುವ ಸಗಟು ಆಭರಣ ವರ್ತಕರ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಬೇರೆ ಬೇರೆ ರಾಜ್ಯಗಳಿಂದ ವರ್ತಕರು ಯಾವುದೇ ದಾಖಲೆ, ಬಿಲ್‍ಗಳಿಲ್ಲದೆ ನಗರಕ್ಕೆ ಭೇಟಿ ನೀಡಿ ಸ್ಥಳೀಯ ಆಭರಣ ವರ್ತಕರಿಗೆ ಚಿನ್ನಾಭರಣ ನೀಡುತ್ತಿರುತ್ತಾರೆ ಎಂಬ ಮಾಹಿತಿ ಆಧರಿಸಿ 23 ಆಭರಣ ವರ್ತಕರ ಮೇಲೆ ದಾಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ 60 ಕೆಜಿ ಚಿನ್ನಾಭರಣ ದಾಸ್ತಾನು ಇರುವುದು ಪತ್ತೆಯಾಗಿದೆ. ಈ ಚಿನ್ನದಿಂದ ಸುಮಾರು 1.3 ಕೋಟಿ ರೂ. ಜಿಎಸ್‍ಟಿ ತೆರಿಗೆ ವಂಚನೆಯಾಗಿರುವುದು ಸ್ಪಷ್ಟವಾಗಿದೆ.  ದಾಖಲೆಗಳಿಲ್ಲದ ಆಭರಣಗಳಿಗೆ ದಂಡ ವಿಧಿಸಲಾಗಿದೆ. ಮುಂದುವರೆದ ತನಿಖೆಯ ತಪಾಸಣೆಯ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ದಾಖಲೆಗಳಿಲ್ಲದ 3.5 ಕೆಜಿ ಚಿನ್ನಾಭರಣವನ್ನು ತಮ್ಮ ಚೀಲಗಳಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಇದಕ್ಕೂ ಕೂಡ ದಂಡ ವಿಧಿಸಲಾಗಿದೆ. ಕಳೆದ 2019ರ ಡಿಸೆಂಬರ್‍ನಲ್ಲಿ ಬೆಂಗಳೂರಿನ ರಾಜಾ ಮಾರ್ಕೆಟ್‍ನಲ್ಲಿರುವ ಚಿನ್ನ, ಬೆಳ್ಳಿ ವರ್ತಕರ ಮೇಲೂ ಇದೇ ರೀತಿ ದಾಳಿ ನಡೆದಿತ್ತು. ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ ಅಂತಾರಾಜ್ಯ ಚಿನ್ನ ಮತ್ತು ಬೆಳ್ಳಿ ಸಾಗಾಟದ ಮೇಲೆ ತೀವ್ರ ನಿಗಾವಹಿಸಿದ್ದು, ರಾಜ್ಯದ ಎಲ್ಲಾ ವರ್ತಕರು ಯಾವುದೇ ಅಧಿಕೃತ ಬಿಲ್ಲುಗಳಿಲ್ಲದ ಸರಕುಗಳನ್ನು ಕೊಳ್ಳಬಾರದು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ಮನವಿ ಮಾಡಿದ್ದಾರೆ.

Facebook Comments

Sri Raghav

Admin