62.86 ಕೋಟಿ ಬೃಹತ್ ವಂಚನೆ ಹಗರಣ ; ಸಿಐಡಿ ತನಿಖೆಗೆ N.R.ರಮೇಶ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.25- ಕಾಮಗಾರಿಗಳನ್ನು ನಿರ್ವಹಣೆ ಮಾಡದೆಯೇ 62.86 ಕೋಟಿ ರೂ. ಗಳಷ್ಟು ಬೃಹತ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿರುವ ಬೃಹತ್ ನೀರ್ಗಾಲುವೆ ಇಲಾಖೆಯ ಅಕಾರಿಗಳ ಹಗರಣವನ್ನು ಸಿಐಡಿ ಅಥವಾ ಎಸಿಬಿಗೆ ವಹಿಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಲಾಗಿದೆ ಎಂದರು. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ಚಲ್ಲಘಟ್ಟ, ವೃಷಭಾವತಿ, ಕೋರಮಂಗಲ ಮತ್ತು ಹೆಬ್ಬಾಳದ ರಾಜಕಾಲುವೆಗಳ ಅಭಿವೃದ್ಧಿಗೆ ಜೆಎನ್‍ಯುಆರ್‍ಎಂ ಅಡಿಯಲ್ಲಿ 496.90 ಕೋಟಿ ಮೊತ್ತದ ಅನುದಾನದಲ್ಲಿ 15 ಪ್ಯಾಕೇಜ್‍ಗಳ ಮೂಲಕ 2005-06ರಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.

ರಾಜಕಾಲುವೆಗಳ ಮರು ನಿರ್ಮಾಣ, ಪ್ರವಾಹ ನಿರ್ವಹಣೆ ಮತ್ತು ಕೊಳಚೆ ನೀರು ಮಾರ್ಗ ಬದಲಾವಣೆ ಎಂಬ ಹೆಸರಿನಲ್ಲಿ 15 ಪ್ಯಾಕೇಜ್‍ಗಳ 496.90 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಬೆಂಗಳೂರು ನಗರ ಪ್ರದೇಶದಲ್ಲಿ ಮಳೆ ನೀರು ನಿರ್ವಹಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯನ್ನು 2021ರಲ್ಲಿ ನೀಡಿದ್ದು, ರಾಜಕಾಲುವೆ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ನಡೆದಿರುವ ಮಹಾ ವಂಚನೆಯನ್ನು ಉಲ್ಲೇಖಿಸಿದ್ದಾರೆ.

ವರದಿಯಲ್ಲಿರುವ ಅಂಶಗಳ ಪ್ರಕಾರ, ರಾಜರಾಜೇಶ್ವರಿ ನಗರ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಬ್ಯಾಟರಾಯನಪುರ ವಲಯಗಳ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಪೈಕಿ ನಿರ್ವಹಣೆಯನ್ನೇ ಮಾಡದ 14 ಕಾಮಗಾರಿಗಳಿಗೆ ಸುಮಾರು 62.86 ಕೋಟಿಗಳಷ್ಟು ಬೃಹತ್ ಮೊತ್ತವನ್ನು 2014-2016ರ ಅವಯಲ್ಲಿ ಮೆ|| ಪ್ರೀತಿ ಕ್ವಾಡ್ ಕನ್ಸಲ್ಟೆಂಟ್ಸ್ ಮತ್ತು ಮೆ|| ಸ್ಟುಪ್ ಕನ್ಸಲ್ಟೆಂಟ್ಸ್ ಸೇರಿದಂತೆ ಹಲವು ಗುತ್ತಿಗೆದಾರ ಸಂಸ್ಥೆಗಳಿಗೆ ಪಾವತಿ ಮಾಡಿರುವ ಅಂಶಗಳು ಬೆಳಕಿಗೆ ಬಂದಿವೆ.

ಮಹಾ ಲೆಕ್ಕಪಾಲರ ಪರಿಶೀಲನಾ ಭೇಟಿ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಹುಳಿಮಾವು ಕೆರೆ ಮತ್ತು ಮಡಿವಾಳ ಕೆರೆಗಳಿಗೆ ಯಥೇಚ್ಛವಾಗಿ ಕೊಳಚೆ ನೀರು ಹರಿಯುತ್ತಿದ್ದುದನ್ನು ಪತ್ತೆ ಹಚ್ಚಲಾಗಿತ್ತು. ಇದರಿಂದ ಯೋಜನೆಯ ನಿಜವಾದ ಉದ್ದೇಶ ಈಡೇರಿರಲಿಲ್ಲ ಎಂಬುದನ್ನು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

14 ಕಾಮಗಾರಿಗಳಿಗೆ ಸಂಬಂಸಿದ ಟೆಂಡರ್ ಪ್ರಕ್ರಿಯೆಯ ದಾಖಲೆಗಳು ಕಳೆದು ಹೋಗಿವೆ ಎಂದು ಪಾಲಿಕೆಯ ಬೃಹತ್ ನೀರ್ಗಾಲುವೆ ಇಲಾಖೆಯ ಮುಖ್ಯ ಅಭಿಯಂತರರು ದಾಖಲಿಸಿರುತ್ತಾರೆ. ಇಷ್ಟೇ ಅಲ್ಲದೆ, ಮೆ|| ಸ್ಟುಪ್ ಕನ್ಸಲ್ಟೆಂಟ್ಸ್ ಸಂಸ್ಥೆಯವರು ಸಲ್ಲಿಸಿದ್ದ್ಧ ನಕಲು ದಾಖಲೆಗಳ ಆಧಾರದಲ್ಲಿ ಸಂಸ್ಥೆಗೆ ಒಟ್ಟು 94.93 ಲಕ್ಷಗಳನ್ನು ಪಾವತಿಸಲು 2018-19ರಲ್ಲಿ ಬೃಹತ್ ನೀರ್ಗಾಲುವೆ ಇಲಾಖೆಯ ಮುಖ್ಯ ಅಭಿಯಂತರರು ಮತ್ತೊಂದು ಅಕ್ರಮವೆಸಗಿರುವುದು ಕಂಡುಬಂದಿದೆ ಎಂದು ರಮೇಶ್ ಆರೋಪಿಸಿದರು.

ಬೃಹತ್ ಹಗರಣಕ್ಕೆ ಸಂಬಂಸಿದಂತೆ ನಕಲಿ ದಾಖಲೆಗಳ ಆಧಾರದಲ್ಲಿ ಕಡತಗಳನ್ನು ಮರು ಸೃಷ್ಟಿ ಮಾಡಲಾಗಿದೆ ಎಂದು ಮಹಾಲೆಕ್ಕಪಾಲಕರು ತಿಳಿಸಿದ್ದಾರೆ. ಅಲ್ಲದೆ, ಎರಡು ವಿಭಿನ್ನವಾದ ಕಾಮಗಾರಿಗಳನ್ನು ಒಂದುಗೂಡಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ ಎಂಬ ವಿಷಯವನ್ನೂ ಸಹ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಕಳೆದುಹೋಗಿವೆ ಎಂದು ದಾಖಲಿಸಿರುವ ಕಡತಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಬೃಹತ್ ನೀರ್ಗಾಲುವೆ ಇಲಾಖೆ ಅಕಾರಿಗಳು ಮಾಡಲೇ ಇಲ್ಲ ಎಂಬುದನ್ನೂ ಸಹ ಮಹಾಲೆಕ್ಕಪಾಲರು ತಿಳಿಸಿರುವುದಲ್ಲದೆ, ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದ್ದಾರೆ.

ಇವರ ವರದಿ ಆಧರಿಸಿ ಪಾಲಿಕೆಗೆ ಮಹಾ ವಂಚನೆ ಎಸಗಿರುವ ಬೃಹತ್ ನೀರ್ಗಾಲುವೆ ಇಲಾಖೆಯಲ್ಲಿ 2014-2016ರ ಅವಯಲ್ಲಿ ಬೊಮ್ಮನಹಳ್ಳಿ ವಲಯ ಮತ್ತು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಕಾರ್ಯಪಾಲಕ ಅಭಿಯಂತರರಾಗಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ, ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸಿರುವವರ ವಿರುದ್ಧ ಮತ್ತು ಇದೇ ಅವಧಿಯಲ್ಲಿ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರಾಗಿದ್ದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹಾಗೆಯೇ, ನಕಲು ದಾಖಲೆಗಳ ಆಧಾರದಲ್ಲಿ ಮೆ|| ಸ್ಟುಪ್ ಕನ್ಸಲ್ಟೆಂಟ್ಸ್ ಸಂಸ್ಥೆಗೆ 94.93 ಲಕ್ಷ ರೂ.ಗಳ ಬಾಕಿ ಮೊತ್ತ ಪಾವತಿಸಲು ಅನುಮೋದನೆ ನೀಡಿರುವ 2018-19ರ ಅವಯಲ್ಲಿ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರ ವಿರುದ್ಧ ಹಾಗೂ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾಲುದಾರರಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ಆಗ್ರಹಿಸಿದ್ದಾರೆ.

 

Facebook Comments