64 ವರ್ಷದ ಬಳಿಕ ಹಿಂದೂ ವ್ಯಕ್ತಿಯ ಸಮಾಧಿ ಅಗೆದುಮುಸ್ಲಿಂ ಧಾರ್ಮಿಕ ವಿಧಾನದ ಪ್ರಕಾರ ಅಂತ್ಯಕ್ರಿಯೆ..!

ಈ ಸುದ್ದಿಯನ್ನು ಶೇರ್ ಮಾಡಿ

4

ಮುದ್ದೇಬಿಹಾಳ,ಅ.1- 64 ವರ್ಷಗಳ ಬಳಿಕ ಹಿಂದೂ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರ ವನ್ನು ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳ ಮೂಲಕ ಮಾಡುವ ಮೂಲಕ ತಾಲೂಕಿನ ಹೊಕ್ರಾಣಿ, ಜಕ್ಕೆರಾಳ, ವಣಕ್ಯಾಳ, ಜಲಪೂರ, ಅಬ್ಬಿಹಾಳ ಗ್ರಾಮಸ್ಥರು ಭಾವೈ ಕ್ಯತೆ ಮೆರೆದಿರುವ ಘಟನೆ ನಿನ್ನೆ ನಡೆದಿದೆ.ಹೊಕ್ರಾಣಿ ಗ್ರಾಮದಲ್ಲಿ ಹಣಮಂತ ಮುತ್ಯಾ ಕೊಂಗನೂರ ಎಂಬುವರು ಅಲಾಯಿ ದೇವರನ್ನು ಹಿಡಿಯುತ್ತಿದ್ದರು. ಮೊಹರಂ ಸಂದರ್ಭದಲ್ಲಿ ಅಲಾಯ್ ದೇವರುಗಳನ್ನು ಹಿಂದೂ ಮುಸ್ಲಿಂರು ಇಲ್ಲಿ ಒಟ್ಟಾಗಿ ಆಚರಿಸುತ್ತಿದ್ದರು. ಹಣಮಂತ ಮುತ್ಯಾ ಅವರ ಮರಣಾನಂತರ ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಅವರನ್ನು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈಚೇಗೆ ಕೆಲವರ ಕನಸಿನಲ್ಲಿ ಬಂದು ನಾನು ಇನ್ನೂ ಕೂತಿದ್ದೇನೆ. ನನ್ನನ್ನು ಮಲಗಿಸಿ ಎಂದು ಹೇಳಿದ್ದ ಹಿನ್ಮೆಲೆಯಲ್ಲಿ ಆ ವ್ಯಕ್ತಿಗಳು ಈ ವಿಷಯವನ್ನು ಊರು ಹಿರಿಯರಿಗೆ ಮುಟ್ಟಿಸಿದ್ದಾರೆ.

ಅದರಂತೆ ಸೆ. 29ರಂದು ರಾತ್ರಿ ಗ್ರಾಮದ ಜುಮ್ಮಣ್ಣ ಜಗಲಿ ಅವರ ಹೊಲದಲ್ಲಿದ್ದ ಹಣಮಂತಮುತ್ಯಾರ ಸಮಾಧಿಯನ್ನು ಅಗೆದು ಅಲ್ಲಿದ್ದ ಅಸ್ತಿಗಳನ್ನು ಪುನಃ ಹೊರತೆಗೆದು ಮುಸ್ಲಿಂರಿಗೆ ಪವಿತ್ರ ದಿನವಾದ ಶುಕ್ರವಾರ ಹಾಗೂ ಹಿಂದೂಗಳಿಗೆ ದೊಡ್ಡದಾದ ಮಹಾಲಯ ಅಮವಾಸ್ಯೆಯಂದು ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳ ಮೂಲಕ ಅವರ ಹೊಲದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿ ಉಳಿ ಹಚ್ಚದ ಕಲ್ಲುಗಳನ್ನು ತಂದು ಗೋರಿಯನ್ನು ನಿರ್ಮಿಸಿದ್ದಾರೆ. ಬಳಿಕ ಇಂದು ಹಿಂದೂ ಹಾಗೂ ಮುಸ್ಲಿಂ ಧರ್ಮಿಯರಿಬ್ಬರೂ ಬಡೇಮಿಯಾ ಹಣಮಂತ ಮುತ್ಯಾರ ಗೋರಿಗೆ ಗಲೀಪ್ ಹಾಕಿ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸಂಗನಬಸ್ಸು ಬಿರಾದಾರ, ಬಾಲಚಂದ್ರ ಮಾದರ, ಬೀರಪ್ಪ ಕೊಂಗನೂರ, ಮುಖಂಡರಾದ ಅಮೀನಸಾಬ ಕೂಚಬಾಳ, ಬಡೇಸಾಬ ಗುರಿಕಾರ, ಬಸಪ್ಪ ಜಗಲಿ, ಶಿವಪ್ಪ ಲೇಬಗೇರಿ, ಮಾನಪ್ಪ ಬಡಿಗೇರ, ಶಿವಲಿಂಗಪ್ಪ ಬಿರಾದಾರ, ಜುಮ್ಮಣ್ಣ ಜಗಲಿ, ಅಡಿವೆಪ್ಪ ಹುಗ್ಗಿಸಿದ್ದಪ್ಪ ಮಾದರ, ಹೊನ್ನಿಂಗಪ್ಪ ಮುರಾಳ ಸೇರಿದಂತೆ ಹೊಕ್ರಾಣಿ, ಜಕ್ಕೇರಾಳ, ವಣಕ್ಯಾಳ, ಜಲಪೂರ, ಅಬ್ಬಿಹಾಳ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.ಗ್ರಾಮೀಣ ಭಾಗದಲ್ಲಿ ಇನ್ನೂ ಧಾರ್ಮಿಕ ನಂಬಿಕೆಗಳಿಗೆ ಬೆಲೆ ಕೊಡುತ್ತಾರೆ ಎಂಬುದಕ್ಕೆ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 64 ವರ್ಷ ಕಳೆದರೂ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಧಾರ್ಮಿಕ ವಿಧಿವಿಧಾನದ ಮೂಲಕ ಭಾವೈಕ್ಯತೆ ಮೆರೆದಿರುವುದು ಮಾದರಿಯಾಗಿದೆ.

ಐದು ಗ್ರಾಮಸ್ಥರು ಕೂಡಿಯೇ ಈ ಧಾರ್ಮಿಕ ಕಾರ್ಯ ಮಾಡಿದ್ದೇವೆ. ಹಣಮಂತ ಮುತ್ಯಾರನ್ನು ಇನ್ನು ಮುಂದೆ ಬಡೇಮಿಯಾ ಹಣಮಂತಮುತ್ಯಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ.
– ಬಿ.ಬಿ.ಬಿರಾದಾರ, ಗ್ರಾ.ಪಂ ಸದಸ್ಯ

► Follow us on –  Facebook / Twitter  / Google+

Facebook Comments

Sri Raghav

Admin