177 ಶಸ್ತ್ರಾಸ್ತ್ರಗಳ ಜತೆ 644 ಉಗ್ರರು ಶರಣು

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಜ.23-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಎಂಟು ನಿಷೇಧಿತ ಉಗ್ರಗಾಮಿ ಸಂಘಟನೆಗಳ 644 ಭಯೋತ್ಪಾದಕರು 177 ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಶರಣಾಗತರಾಗಿದ್ದಾರೆ.  ಇಷ್ಟು ಸಂಖ್ಯೆ ಉಗ್ರಗಾಮಿಗಳು ಮತ್ತು ಬಂಡುಕೋರರು ಒಟ್ಟಿಗೆ ಶರಣಾಗಿರುವುದು ಇದೇ ಮೊದಲು.

ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್ ಅವರ ಸಮ್ಮುಖದಲ್ಲಿ ಒಟ್ಟು 644 ಉಗ್ರರು ಶರಣಾಗತರಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಲ್ಬಾ (ಐ), ಎನ್‍ಡಿಎಫ್‍ಬಿ, ಆರ್‍ಎನ್‍ಎಲ್‍ಎಫ್, ಕೆಎಲ್‍ಒ, ಸಿಪಿಐ(ಮಾವೋವಾದಿ), ಎನ್‍ಎಸ್‍ಎಲ್‍ಎ, ಎಡಿಎಫ್ ಮತ್ತು ಎನ್‍ಎಲ್‍ಎಫ್‍ಬಿ-ಈ ಎಂಟು ನಿಷೇಧಿತ ಭಯೋತ್ಪಾದನೆ ಸಂಘಟನೆಗಳ ಸದಸ್ಯರು 177 ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತಿಯಾಗಿದ್ದಾರೆ. ಬಂಡುಕೋರರು ಮತ್ತು ಉಗ್ರರನ್ನು ಸಮಾಜ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ.

ಇದು ಅಸ್ಸಾಂ ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಅತ್ಯಂತ ಮಹತ್ವದ ದಿನ. ಎಂಟು ಉಗ್ರಗಾಮಿ ಬಣಗಳ ನಾಯಕರು ಮತ್ತು ಬಂಡುಕೋರರೂ ಸೇರಿದಂತೆ ಒಟ್ಟಿಗೆ 644 ಮಂದಿ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇದು ಬೃಹತ್ ಸಂಖ್ಯೆಯ ಭಯೋತ್ಪಾದಕರ ಶರಣಾಗತಿಯಾಗಿದೆ.

Facebook Comments