ಎದುರಾಳಿ ಗ್ಯಾಂಗ್ ಮೇಲೆ ದಾಳಿಗೆ ಸಜ್ಜಾಗಿದ್ದ 7 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ಎದುರಾಳಿ ಗ್ಯಾಂಗ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಸಜ್ಜಾಗಿದ್ದ ಇಬ್ಬರು ರೌಡಿಗಳು ಸೇರಿದಂತೆ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಯನಗರ ಪೊಲೀಸ್ ಠಾಣೆಯ ರೌಡಿ ಶೀಟರ್‍ಗಳಾದ ಲಕ್ಷ್ಮಿ ನಾರಾಯಣ ಅಲಿಯಾಸ್ ಲಕ್ಷ್ಮಿ, ರಾಕೇಶ್ ಅಲಿಯಾಸ್ ರಾಕಿ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ರೌಡಿಗಳು ಸೇರಿದಂತೆ ಇವರ ಸಹಚರರಾದ ನವೀನ್, ಕಿಶೋರ್, ವಿನೋದ್, ನಾಗರಾಜ್, ಹರೀಶ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೆ.2ರಂದು ರಾತ್ರಿ ಬನ್ನೇರುಘಟ್ಟ ಮುಖ್ಯರಸ್ತೆ, ಗುರು ಪ್ಯಾಲೆಸ್ ಬಳಿ ಈ ಗ್ಯಾಂಗ್ ಎದುರಾಳಿ ಗ್ಯಾಂಗ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಹಣ, ಆಭರಣ ದೋಚಲು ಹೊಂಚುಹಾಕುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾವಿಸಿ ಇಬ್ಬರು ರೌಡಿಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ಹುಳಿಮಾವು ಪೊಲೀಸ್ ಠಾಣೆಯ ರೌಡಿ ಶೀಟರ್ ಅಂಬರೀಶನ ಸಹಚರರು. ಇವರೆಲ್ಲ ಗ್ಯಾಂಗ್ ಕಟ್ಟಿಕೊಂಡು ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ವಾಹನ ಸವಾರರು ಹಾಗೂ ಸಾರ್ವಜನಿಕರನ್ನೇ ಗುರಿಯಾಗಿರಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಆಭರಣ ದೋಚಲು ಹೊಂಚು ಹಾಕುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳಿಂದ ಮೂರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಬಿ.ಎಸ್.ಅಂಗಡಿ ಅವರ ಮಾರ್ಗದರ್ಶನದಲ್ಲಿ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಚ್.ಎಸ್.ಪರಮೇಶ್ವರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

ದರೋಡೆಗೆ ಸಂಚು ರೌಡಿ, ಸಹಚರರ ಸೆರೆ
ಬೆಂಗಳೂರು, ಸೆ.7- ದಾರಿಯಲ್ಲಿ ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ವೈಯಾಲಿಕಾವಲ್ ರೌಡಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೆ.4ರಂದು ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಲೋಯರ್ ಪ್ಯಾಲೆಸ್ ಆರ್ಚಡ್ ಫುಟ್‍ಬಾಲ್ ಮೈದಾನದ ಬಳಿ ಆರು ಮಂದಿ ದರೋಡೆಕೋರರು ಸುಲಿಗೆಗೆ ಹೊಂಚು ಹಾಕುತ್ತಿದ್ದರು.

ದಾರಿಹೋಕರಿಗೆ ಮಾರಕಾಸ್ತ್ರದಿಂದ ಬೆದರಿಸಿ ಹಲ್ಲೆ ಮಾಡಿ ಹಣ, ಆಭರಣ ದೋಚಲು ಸಜ್ಜಾಗಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದೆ. ಸಿಸಿಬಿ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ರೌಡಿ ಸೇರಿದಂತೆ ಆತನ ಸಹಚರರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಧರ್ಮೇಂದ್ರ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ತನ್ವೀರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments