7 ಸ್ಪೋಟಕ ನಿಷ್ಕ್ರಿಯಗೊಳಿಸಿ ನಕ್ಸಲ್ ವಿಧ್ವಂಸಕ ಕೃತ್ಯ ತಪ್ಪಿಸಿದ ಬಿಎಸ್‍ಎಫ್

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಅ.20- ಬಿಎಸ್‍ಎಫ್ ಯೋಧರ ಸಮಯಪ್ರಜ್ಞೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಒಡಿಶಾದಲ್ಲಿ ನಕ್ಸಲರಿಂದ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ.  ಮಾಲ್ಕನ್‍ಗಿರಿ ಜಿಲ್ಲೆಯ ಒಡಿಶಾ-ಆಂಧ್ರಪ್ರದೇಶ ಗಡಿಭಾಗದ ರಸ್ತೆಯಲ್ಲಿ ಮಾವೋವಾದಿ ಬಂಡುಕೋರರು ಇಟ್ಟಿದ್ದ ಏಳು ಸುಧಾರಿತ ಸ್ಪೋಟಕಗಳನ್ನು(ಐಇಡಿ) ಯೋಧರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ.

ಇದರಿಂದ ಈ ಪ್ರದೇಶದಲ್ಲಿ ನಡೆಯಬಹುದಾಗಿದ್ದ ದುಷ್ಕøತ್ಯಗಳು ತಪ್ಪಿದಂತಾಗಿದೆ. ಸ್ವಾಭಿಮಾನ್ ಅಂಚಲ್ ಎಂಬಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ ಬಂಡುಕೋರರು) ಏಳು ಸ್ಫೋಟಕಗಳನ್ನು ರಸ್ತೆಯಲ್ಲಿಟ್ಟು ಸೇನೆ ಮತ್ತು ಪೊಲೀಸ್ ವಾಹನಗಳನ್ನು ಸ್ಫೋಟಿಸಿ ಸಾವುನೋವು ಕೃತ್ಯ ಎಸಗಲು ಸಜ್ಜಾಗಿದ್ದರು.

ಖಚಿತ ಸುಳಿವಿನ ಮೇರೆಗೆ ನಿನ್ನೆ ರಾತ್ರಿಯಿಂದ ಈ ಪ್ರದೇಶವನ್ನು ಯೋಧರು ಜಾಲಾಡುತ್ತಿದ್ದಾಗ 7 ಐಇಡಿಗಳು ಪತ್ತೆಯಾಗಿದ್ದವು. ಇಂದು ಮುಂಜಾನೆ ಬಾಂಬ್ ನಿಗ್ರಹದಳದವರನ್ನು ಕರೆಸಿ ಎಲ್ಲ 7 ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಬಿಎಸ್‍ಎಫ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವಾಭಿಮಾನ್‍ಅಂಚಲ್ ಪ್ರದೇಶ ವನ್ನು ಅಭಿವೃದ್ಧಿಗೊಳಿಸಲು ಒಡಿಶಾ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರು ಮಾವೋವಾದಿಗಳು ಪ್ರಗತಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ.

Facebook Comments