ಕಲಬುರಗಿ : ಲಾರಿಗೆ ಕಾರು ಡಿಕ್ಕಿ, ಭೀಕರ ಅಪಘಾತದಲ್ಲಿ ಗರ್ಭಿಣಿ ಸೇರಿ 7 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರ್ಗಿ, ಸೆ.27- ಗರ್ಭಿಣಿಯನ್ನು ಹೆರಿಗೆಗೆ ಕರೆದೊಯ್ಯುತ್ತಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತಾಲ್ಲೂಕಿನ ಆಳಂದ ರಸ್ತೆಯ ಸಾವಳಗಿ ಕ್ರಾಸ್ ಬಳಿ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಸಂಭವಿಸಿದೆ.

ಆಳಂದ ನಿವಾಸಿಗಳಾದ ಗರ್ಭಿಣಿ ಇರ್ಫಾನಾ ಬೇಗಂ (25), ರುಬಿಯಾ ಬೇಗಂ (50), ಅಬೇದಾಬಿ ಬೇಗಂ (50), ಜಯಚುನಬಿ (60) ಹಾಗೂ ಮುನೀರ್ (28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಎಂಬುವವರೇ ಮೃತಪಟ್ಟ ದುರ್ದೈವಿಗಳು.

ತುಂಬು ಗರ್ಭಿಣಿ ಇರ್ಫಾನಾ ಬೇಗಂಗೆ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪತಿ ಮತ್ತು ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಕಾರ್ ಚಾಲಕ ಅವಸರದಲ್ಲಿ ವಾಹನ ಓಡಿಸುವಾಗ ರಸ್ತೆ ಪಕ್ಕ ಎದುರಿಗೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಕೂಡ ಉರುಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದೆ.

ಸಾವಳಗಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಯಾರಾದರೂ ಬದುಕಿದ್ದರೆ ಆಸ್ಪತ್ರೆಗೆ ಸೇರಿಸಬೇಕೆಂದು ಪ್ರಯತ್ನ ಮಾಡಿದರೂ, ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಎಲ್ಲರ ದೇಹಗಳೂ ಸಿಕ್ಕಿಕೊಂಡಿದ್ದವು. ಹೀಗಾಗಿ ರಕ್ಷಣಾ ಕಾರ್ಯ ಸಾಧ್ಯವಾಗಲಿಲ್ಲ.

ಕೆಲ ಸಮಯದ ನಂತರ ಕಲಬುರಗಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗ್ರಾಮಸ್ಥರ ಸಹಾಯದಿಂದ ಕಾರ್ ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin