BIG NEWS : ಭಾರತದಲ್ಲಿ ಒಂದೇ ದಿನ 24,246 ಮಂದಿಗೆ ಕೊರೋನಾ ಪಾಸಿಟಿವ್, 425 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜು.6-ಕಿಲ್ಲರ್ ಕೋವಿಡ್ ವೈರಸ್ ಗಂಡಾಂತರದಿಂದ ತತ್ತರಿಸುತ್ತಿರುವ ಭಾರತದಲ್ಲಿ ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಅತಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಅತ್ಯಂತ ಬಾಧಿತ ದೇಶಗಳಲ್ಲಿ ಈಗಾಗಲೇ ರಷ್ಯಾವನ್ನು ಹಿಂದಿಕ್ಕಿ ಮೂರನೆ ಸ್ಥಾನದಲ್ಲಿರುವ ಭಾರತ ಇನ್ನು ಕೆಲವೇ ದಿನಗಳಲ್ಲಿ ದ್ವಿತೀಯ ಶ್ರೇಣಿಯಲ್ಲಿರುವ ಬ್ರೆಜಿಲ್‍ಅನ್ನು ಹಿಂದಕ್ಕೆ ತಳ್ಳುವ ಆತಂಕವಿದೆ.

24 ತಾಸುಗಳಲ್ಲಿ ಮತ್ತೆ ದಾಖಲೆ ಪ್ರಮಾಣದ 24,248 ಸಾಂಕ್ರಾಮಿಕ ರೋಗ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ 425 ಸಾವುಗಳು ಸಂಭವಿಸಿದೆ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಏಳು ಲಕ್ಷ ಹಾಗೂ ಸಾವಿನ ಪ್ರಮಾಣ 20,000 ಸನಿಹದಲ್ಲಿದೆ.

ದೇಶದಲ್ಲಿ ನಿನ್ನೆವರೆಗೆ 99.69 ಲಕ್ಷಕ್ಕೂ ಅಧಿಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಜುಲೈ ತಿಂಗಳ ಆರನೆ ದಿನವೂ ಹೆಮ್ಮಾರಿ ಆರ್ಭಟ ಅತಂಕಕಾರಿ ಮಟ್ಟದಲ್ಲೇ ಮುಂದುವರಿದಿದ್ದು, ಇನ್ನೆರಡು ತಿಂಗಳು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಕೊರೊನಾ ನಂಜು ನಾಗಲೋಟದಲ್ಲಿ ಹಬ್ಬುತ್ತಿರುವುದರಿಂದ ಭಾರತೀಯರು ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ. ಮುಂದೇನು ಎಂಬ ಭಯ ಮನೆ ಮಾಡಿದೆ. ನಿನ್ನೆ ಒಂದೇ ದಿನ (24 ಗಂಟೆಗಳ ಅವಧಿ) 24,248 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಸತತ ನಾಲ್ಕು ದಿನಗಳಿಂದ ದೇಶದಲ್ಲಿ 20,000ಕ್ಕೂ ಹೆಚ್ಚು ಸಾಂಕ್ರಾಮಿಕ ರೋಗಗಳು ಪತ್ತೆಯಾಗಿರುವುದು ಆಘಾತಕಾರಿಯಾಗಿದೆ.

ಈ ಅಂಕಿ-ಅಂಶಗಳನ್ನು ಗಮನಿಸಿದರೆ ಜುಲೈ ಮತ್ತು ಆಗಸ್ಟ್ ಭಾರತಕ್ಕೆ ಭಾರೀ ಗಂಡಾಂತರ ಎಂಬುದು ಮನವರಿಕೆಯಾಗುತ್ತಿದೆ. ಸಮುದಾಯ ಸೋಂಕು ಉಲ್ಬಣ ಭೀತಿಯಲ್ಲಿ ಬಹುತೇಕ ರಾಜ್ಯಗಳು ನರಳುತ್ತಿವೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ಎಂಟನೆ ದಿನ. ನಿರಂತರ 27 ದಿವಸಗಳಿಂದ 10,000+ ಪ್ರಮಾಣದಲ್ಲೇ ಮುಂದುವರಿದಿದೆ. ಅಲ್ಲದೆ, 14,000+ ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಸತತ 17ನೆ ದಿನವಾಗಿದೆ. ನಿರಂತರ 13 ದಿನಗಳಿಂದ ದಿನಂಪ್ರತಿ 15,000ಕ್ಕೂ ಅಧಿಕ ಸಾಂಕ್ರಾಮಿಕ ರೋಗಗಳು ದೃಢಪಟ್ಟಿವೆ.

ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ ಸುಮಾರು 20,100 ಮತ್ತು ಸೋಂಕು ಬಾಧಿತರ ಸಂಖ್ಯೆ 7.10 ಲಕ್ಷ ತಲುಪುವ ಆತಂಕವಿದೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 425 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 19,693ಕ್ಕೇರಿದೆ. ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 6,97,418 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜುಲೈ ಮತ್ತು ಅಗಸ್ಟ್‍ನಲ್ಲಿ ಸಾಂಕ್ರಾಮಿಕ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಾಗುವ ಆತಂಕ ನಿಶ್ಚಳವಾಗಿದೆ. ಅಲ್ಲದೆ, ಪರಿಣಾಮಕಾರಿ ಲಸಿಕೆ ಅನ್ವೇಷಣೆಯಲ್ಲಿ ವಿಳಂಬವಾಗುತ್ತಿರುವುದು ಮತ್ತಷ್ಟು ಉಲ್ಬಣಕ್ಕೆ ಎಡೆಮಾಡಿಕೊಡಲಿದೆ.

ಈ ನಡುವೆ 24 ತಾಸುಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.60.85ರಷ್ಟು ಏರಿಕೆ ಕಂಡುಬಂದಿದ್ದು, 4.24 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವುದು ಸಮಾಧಾನಕಾರ ಸಂಗತಿ ದೇಶದಲ್ಲಿ ಈವರೆಗೆ 99,69,662 ಮಂದಿಗೆ ಕೋವಿಡ್-19 ಸ್ಯಾಂಪಲ್‍ಗಳ ಪರೀಕ್ಷೆ ಮಾಡಲಾಗಿದೆ.

ನಿನ್ನೆ ಒಂದೇ ದಿನ ದೇಶಾದ್ಯಂತ 1,80,597 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಏಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ. ಭಾರತದಲ್ಲಿ ಈಗ ಸುಮಾರು ಏಳು ಲಕ್ಷದಷ್ಟು ಸೋಂಕಿತರಿದ್ದು, ಮೂರನೆ ಸ್ಥಾನದಲ್ಲಿರುವ ರಷ್ಯಾವನ್ನು ಹಿಂದಿಕ್ಕಿದೆ.

ಅಮೆರಿಕ ಮತ್ತು ಬ್ರೆಜಿಲ್ ಅನುಕ್ರಮವಾಗಿ ಮೊದಲ ಮತ್ತು ಎರಡನೆ ಸ್ಥಾನದಲ್ಲಿದೆ. ಭಾರತದಲ್ಲಿನ ಪರಿಸ್ಥಿತಿ ಇದೇ ರೀತಿ ಉಲ್ಬಣಕಾರಿಯಾಗಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ದ್ವಿತೀಯ ಶ್ರೇಣಿಯಲ್ಲಿರುವ ಬ್ರೆಜಿಲ್ (16 ಲಕ್ಷಕ್ಕೂ ಹೆಚ್ಚು ಪಾಸಿಟಿವ್ ಕೇಸ್) ಹಿಂದಿಕ್ಕುವ ಸಾಧ್ಯತೆ ಇದೆ.

Facebook Comments