ಮಹಾರಾಷ್ಟ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾದ 7 ನಕ್ಸಲರು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.10- ಮಹಾರಾಷ್ಟ್ರದಲ್ಲಿ ಉತ್ತಮ ಬೆಳವಣಿಗೆಯೊಂದರಲ್ಲಿ ಮತ್ತೆ ಏಳು ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಬಯಸಿರುವ ತಮಗೆ ನವಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ.

ಮಹಾರಾಷ್ಟ್ರದ ನಕ್ಸಲ್‍ಪೀಡಿತ ಗಡ್ ಚಿರೋಲಿಯಲ್ಲಿ ಇಂದು ಒಟ್ಟು ಏಳು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಪೈಕಿ ಮೂವರು ಮಹಿಳೆಯರು ಕೂಡ ಇದ್ದು ಇವರನ್ನು ರಾಕೇಶ್ ಅಲಿಯಾಸ್ ಗಣೇಶ್ ಶಂಕು ಅಚಾಲಾ, ದೇವಿದಾಸ್ ಅಲಿಯಾಸ್ ಮಣಿರಾಮï ಸೋನು ಆಚಾಲಾ, ರೇಷ್ಮಾ ಅಲಿಯಾಸ್ ಜೈ ದುಲ್ಸು ಕೋವಾಚಿ, ಅಖಿಲಾ ಅಲಿಯಾಸ್ ರಾಧೆ ಜುರೆ, ಶಿವ ವಿಜಯ ಪೊಟವಿ, ಕರುಣಾ ಅಲಿಯಾಸ್ ಕುಮ್ಮೆ ರಾಮ್‍ಸಿಂಗ್ ಮಡವಿ ಮತ್ತು ರಾಹುಲ್ ಅಲಿಯಾಸ್ ದಮ್ಜಿ ಸೊಮ್ಜಿ ಪಲ್ಲೆ ಎಂದು ಗುರುತಿಸಲಾಗಿದೆ.

ಶರಣಾದ ನಕ್ಸಲರ ಮೇಲೆ ಒಟ್ಟು 33 ಲಕ್ಷ ಬಹುಮಾನ ನಿಗದಿ ಪಡಿಸಲಾಗಿತ್ತು. ಈ ಹಿಂದೆ ಹಲವು ಕುಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಇವರು, ಇದೀಗ ಮಹಾರಾಷ್ಟ್ರ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಮನವಿಗೆ ಸ್ಪಂದಿಸಿ ನಕ್ಸಲ್ ವಾದ ತೊರೆದು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ.

ಕಳೆದ ಜುಲೈನಲ್ಲೂ ಕೂಡ ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು 6 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದರು.  ಮತ್ತಷ್ಟು ಮಾವೋವಾದಿ ಬಂಡುಕೋರರು ಸಮಾಜದ ಮುಖ್ಯವಾಹಿನಿಗೆ ಹಾತೊರೆಯುತ್ತಿದ್ದು, ಮತ್ತಷ್ಟು ಮಂದಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತರಾಗುತ್ತಿದ್ದಾರೆ.

Facebook Comments