ನಾಲ್ವರು ಪೊಲೀಸರ ಕೊಂದಿದ್ದ 7 ನಕ್ಸಲರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಲತೇಹರ್, ಜ.7- ಜಾರ್ಖಂಡ್‍ನ ಜಾಂಡ್ವದಲ್ಲಿ ಎರಡು ತಿಂಗಳ ಹಿಂದೆ ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದ ಮಾವೋವಾದಿ ತಂಡದ ಏಳು ನಕ್ಸಲರನ್ನು ಸೆರೆ ಹಿಡಿಯಲಾಗಿದೆ. ಬಂಧಿತ ಬಂಡುಕೋರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಬಂಧಿತ ಏಳು ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆದ ದಾಳಿ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದರು.

ಶಿಶಿರ್ ಅರಣ್ಯ ಪ್ರದೇಶದ ಬಾಲುನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಪ್ತ ಸ್ಥಳವೊಂದರಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಸುಳುವಿನ ಮೇರೆಗೆ ಜಂಟಿ ಪಡೆಗಳು ದಾಳಿ ನಡೆಸಿ ಏಳು ಜನರನ್ನು ಬಂಧಿಸಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಆನಂದ ತಿಳಿಸಿದ್ದಾರೆ. ಜಾಂಡ್ವಾದಲ್ಲಿ ನ.22ರಂದು ಮಾವೋವಾದಿಗಳ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮ ರಾಗಿದ್ದರು.

Facebook Comments