ಬ್ರೇಕಿಂಗ್ : ಸಂಪುಟ ಸೇರಿದ ಸಪ್ತ ಸಚಿವರು, ಸರಳ ಸಮಾರಂಭದಲ್ಲಿ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಬಹುದಿನಗಳಿಂದ ಚಾತಕಪಕ್ಷಿಯಂತೆ ಎದುರುನೋಡುತ್ತಿದ್ದ ಬಹುನಿರೀಕ್ಷಿತ ಸಚಿವ ಸಂಪುಟಕ್ಕೆ ಇಂದು ಹೊಸದಾಗಿ 7 ಮಂದಿ ಶಾಸಕರು ಸಚಿವರಾಗಿ ಸೇರ್ಪಡೆಯಾದರು.  ಸರಿಸುಮಾರು ಒಂದು ವರ್ಷದ ನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಶಾಸಕರಾದ ಉಮೇಶ್ ಕತ್ತಿ(ಹುಕ್ಕೇರಿ), ಮುರುಗೇಶ್ ನಿರಾಣಿ(ಬೀಳಗಿ), ಎಸ್.ಅಂಗಾರ(ಸುಳ್ಯ), ಅರವಿಂದ ಲಿಂಬಾವಳಿ(ಮಹಾದೇವಪುರ) ಹಾಗೂ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಮತ್ತು ಸಿ.ಪಿ.ಯೋಗೇಶ್ವರ್ ಅವರುಗಳು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಜೆ 3.50ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಕಾರ ಗೌಪ್ಯತೆಯನ್ನು ಬೋಸಿದರು.  ಮೊದಲಿಗರಾಗಿ ಉಮೇಶ್ ಕತ್ತಿ ದೇವರು, ರೈತರ ಹೆಸರಿನಲ್ಲಿ , ನಂತರ ಅರವಿಂದ ಲಿಂಬಾವಳಿ ದೇವರು ಹೆಸರಿನಲ್ಲಿ, ಎಂಟಿಬಿ ನಾಗರಾಜ್ ಕೂಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಮುರುಗೇಶ್ ನಿರಾಣಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 5ನೇಯವರಾಗಿ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.  6ನೇಯವರಾಗಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ದೇವರು ಹೆಸರಿನಲ್ಲಿ ಹಾಗೂ 7ನೇಯವರಾಗಿ ಶಾಸಕ ಎಸ್.ಅಂಗಾರ ಕೂಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರಾದ ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್.ಶಂಕರ್, ಸಿ.ಪಿ.ಯೋಗೇಶ್ವರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲು ಮುಟ್ಟಿ ನಮಸ್ಕರಿಸಿದರು.  ಇಂದು ಸೇರ್ಪಡೆಯಾದ ಸಚಿವರೆಲ್ಲರೂ ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಬಹುತೇಕ ಭರ್ತಿಯಾಗಿದ್ದು, ಅಬಕಾರಿ ಸಚಿವ ಹೆಚ್.ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಒಂದು ಸ್ಥಾನ ಮಾತ್ರ ಉಳಿಯಲಿದೆ.  ಮೇಲ್ನೋಟಕ್ಕೆ ಇದೊಂದು ಸಮತೋಲನದ ಸಂಪುಟ ರಚನೆ ಎಂದು ಹೇಳಲಾಗುತ್ತಿದ್ದರೂ ಸಿಎಂ ಯಡಿಯೂರಪ್ಪನವರು ರಾಜಕೀಯ ಲೆಕ್ಕಾಚಾರ ಹಾಕಿಯೇ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ಪ್ರದೇಶವಾರು ಮತ್ತು ಜಾತಿಗೂ ಆದ್ಯತೆ ನೀಡಿರುವ ಅವರು ಸಾಮಾಜಿಕ ನ್ಯಾಯಕ್ಕೂ ಒತ್ತು ಕೊಟ್ಟಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾದ 7ಮಂದಿ ಸಚಿವರಲ್ಲಿ ಇಬ್ಬರು ವೀರಶೈವರು, 2 ಪರಿಶಿಷ್ಟ ಜಾತಿ, 2 ಕುರುಬ ಹಾಗೂ ಒಂದು ಒಕ್ಕಲಿಗ ಸಮುದಾಯಕ್ಕೆ ಸ್ಥಾನ ನೀಡಲಾಗಿದೆ.

ಮುಂಬೈ ಕರ್ನಾಟಕ ಭಾಗದಿಂದ ಪ್ರಬಲ ವೀರಶೈವ ಸಮುದಾಯಕ್ಕೆ ಸೇರಿದ ಹಿರಿಯ ಮುಖಂಡ ಉಮೇಶ್ ಕತ್ತಿ, ಕಲ್ಯಾಣ ಕರ್ನಾಟಕ ಭಾಗದಿಂದ ಪಂಚಮಸಾಲಿಯ ಪ್ರಭಾವಿ ನಾಯಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಲಾಗಿದೆ.
ನಾಯಕತ್ವದ ವಿರುದ್ಧ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್‍ಗೆ ಪರ್ಯಾಯವಾಗಿ ನಿರಾಣಿಯನ್ನು ಸಂಪುಟಕ್ಕೆ ತೆಗೆದುಕೊಂಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ ಬಿಎಸ್‍ವೈ ಅವರದ್ದಾಗಿದೆ.

ಪರಿಶಿಷ್ಟ ಜಾತಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ತಣ್ಣಗಾಗಿಸಲು ಈ ಬಾರಿ ಅದೇ ಸಮುದಾಯವನ್ನು ಪ್ರತಿನಿಸುವ ಇಬ್ಬರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿರುವ ಅಂಗಾರ ಮೊದಲಬಾರಿಗೆ ಸಚಿವರಾಗಿದ್ದಾರೆ.

ಕೆಲವು ಕಾರಣಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಗೂ ಸಚಿವ ಸ್ಥಾನ ಕೊಡುವ ಮೂಲಕ ಎಸ್ಸಿ ಸಮುದಾಯಕ್ಕೆ ತಮ್ಮ ಪಕ್ಷ ಸೂಕ್ತ ಸ್ಥಾನಮಾನ ನೀಡಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ.

ಸರ್ಕಾರ ರಚನೆಗಾಗಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್‍ಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಲಾಗಿದೆ. ಇಬ್ಬರೂ ಕೂಡ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವಲ್ಲಿ ತೆರೆಮರೆಯಲ್ಲಿ ಕುಳಿತು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಹಾಗೂ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ಗೂ ಕೂಡ ಮಂತ್ರಿಯಾಗುವ ಅದೃಷ್ಟ ಒದಗಿಬಂದಿತು.
ಕೊನೆ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾಗಲು ಮುನಿರತ್ನ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಚಿತ್ರದುರ್ಗದ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ಬಸವನಗೌಡ ಪಾಟೀಲ್ ಯತ್ನಾಳ್, ಸುನೀಲ್‍ಕುಮಾರ್, ರಾಜುಗೌಡ ನಾಯಕ್ ಸೇರಿದಂತೆ ಅನೇಕರು ನಡೆಸಿದ ಪ್ರಯತ್ನ ಫಲಕೊಡಲಿಲ್ಲ.

ವರಿಷ್ಠರ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕಾದ ಸಂದಿಗ್ಧ ಸ್ತಿತಿಯಲ್ಲಿದ್ದ ಯಡಿಯೂರಪ್ಪ ಅವರು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮುನಿರತ್ನಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ.
ಸಂಪುಟಕ್ಕೆ ತೆಗೆದುಕೊಳ್ಳುವಂತೆ ಕೊನೆ ಕ್ಷಣದವರೆಗೂ ಮುನಿರತ್ನ ಇನ್ನಿಲ್ಲದ ಕಸರತ್ತು ನಡೆಸಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಅನೇಕರು ನಡೆಸಿದ ಪ್ರಯತ್ನ ವಿಫಲವಾಯಿತು.  ಅನಿವಾರ್ಯವಾಗಿ ಮುನಿರತ್ನ ಮುನಿಸಿಕೊಂಡೇ ಸಿಎಂ ನಿವಾಸ ಕಾವೇರಿಯಿಂದ ನಿರ್ಗಮಿಸಿದರು.

Facebook Comments

Sri Raghav

Admin