700 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ರಸ್ತೆಗಳಿಗೆ ಆಧುನಿಕ ಟಚ್ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಂಗಳೂರು, ಮೇ 16- ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸುಮಾರು 700 ಕೋಟಿ ರೂ. ವೆಚ್ಚದಲ್ಲಿ 50 ರಸ್ತೆಗಳನ್ನು ಟೆಂಡರ್‍ಶೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.  ಬಿಬಿಎಂಪಿ ವ್ಯಾಪ್ತಿಯಲ್ಲಿ ಟೆಂಡರ್‍ಶೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ 7 ಪ್ರಮುಖ ರಸ್ತೆಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.  ಟೆಂಡರ್‍ಶೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಅಗೆಯದಂತೆ ನಿರ್ಮಿಸಲಾಗಿದೆ. ಇದರ ಜತೆಗೆ ಪಾದಚಾರಿಗಳ ಅನುಕೂಲಕ್ಕೆ ತಕ್ಕಂತೆ ಉತ್ತಮ ಫುಟ್‍ಪಾತ್ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.  ಉಳಿದ 50 ರಸ್ತೆಗಳನ್ನು ಟೆಂಡರ್‍ಶೂರ್ ಯೋಜನೆಯಡಿ ಅಭಿವೃದ್ಧಿಪಡಿಸಲು 700ಕೋಟಿ ರೂ. ನಿಗದಿಪಡಿಸಲಾಗಿದ್ದು, ಅಧಿಕಾರಿಗಳು ನಿಗದಿತ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸಿಎಂ ತಾಕೀತು ಮಾಡಿದರು.


 

ಆಯುಕ್ತರಿಗೆ ಸಿಎಂ ತರಾಟೆ:
ಮೈಸೂರು ರಸ್ತೆಯಲ್ಲಿ ಬೃಹತ್ ಮಳೆನೀರುಗಾಲುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಚಿವ ಎಂ.ಕೃಷ್ಣಪ್ಪ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.  ಕೂಡಲೇ ಆಯುಕ್ತ ಮಂಜುನಾಥ್‍ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳಲಿಲ್ಲ ಎಂದರೆ ಏನ್ರಿ ನೀವು ಕೆಲಸ ಮಾಡ್ತಾಯಿರೋದು, ಯಾರ್ರೀ ಅವ್ರು, ಮಳೆನೀರುಗಾಲುವೆ ಚೀಫ್ ಇಂಜಿನಿಯರ್ ಸಿದ್ದೇಗೌಡ, ಕೆಲ್ಸ ಬೇಗ ಮುಗಿಸೋಕೆ ಹೇಳ್ರಿ. ಇಲ್ಲಾಂದ್ರೆ ಸೇವೆಯಿಂದ ಅಮಾನತುಗೊಳಿಸಿ ಎಂದು ತಾಕೀತು ಮಾಡಿದರು.

 

ನಿವೃತ್ತ ಸೈನಿಕರ ಅಸಮಾಧಾನ:
ನಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಿಚ್‍ಮಂಡ್ ಸರ್ಕಲ್ ಸಮೀಪದ ಟೆಂಡರ್‍ಶೂರ್ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ನಮ್ಮ ಸಮಸ್ಯೆ ಆಲಿಸದೆ ಅವಮಾನಿಸಿದ್ದಾರೆ ಮಾಜಿ ಸೈನಿಕ ಉತ್ತಪ್ಪ ಸೇರಿದಂತೆ ಹಲವಾರು ನಿವೃತ್ತ ಯೋಧರು ಅಸಮಾಧಾನ ವ್ಯಕ್ತಪಡಿಸಿದರು.

 

ಯಾವ ಯಾವ ರಸ್ತೆ ಉದ್ಘಾಟನೆ:
ಒಟ್ಟಾರೆ 116 ಕೋಟಿ ರೂ. ವೆಚ್ಚದಲ್ಲಿ ಸುಮಾರು 9.19 ಕೀ.ಮೀ. ದೂರದ ರೆಸಿಡೆನ್ಸಿ ರಸ್ತೆ, ರಿಚ್‍ಮಂಡ್ ರಸ್ತೆ, ಕನ್ನಿಂಗ್‍ಹ್ಯಾಮ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಸೆಂಟ್‍ಮಾಕ್ರ್ಸ್ ರಸ್ತೆ, ಕಮಿಷರಿಯೇಟ್ ರಸ್ತೆ ಹಾಗೂ ಮ್ಯೂಜಿಯಂ ರಸ್ತೆಗಳನ್ನೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಟೆಂಡರ್‍ಶೂರ್ ಮಾದರಿಯಡಿ ಅಭಿವೃದ್ಧಿಪಡಿಸಲಾಗಿದೆ.

 

ಏನೇನಿದೆ:
* ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸಾರಗವಾಗಿ ನಡೆದು ಹೋಗುವಂತಹ ಪಾದಚಾರಿ ಮಾರ್ಗ.
* ರಸ್ತೆಯ ವಿವಿಧ ಪಥ ಅಗಲಗಳನ್ನು ಏಕರೂಪ ಪಥವನ್ನಾಗಿ ಅಭಿವೃದ್ಧಿ.
* ವಿದ್ಯುತ್, ಓಎಫ್‍ಸಿ, ಜಲಮಂಡಳಿ ಮತ್ತು ಮಳೆ ನೀರು ಚರಂಡಿಗಳಿಗೆ ಪಾದಚಾರಿ ಮಾರ್ಗದಲ್ಲಿ ವಿವಿಧ ಡಕ್ಟ್‍ಗಳನ್ನು ನಿರ್ಮಿಸಲಾಗಿದೆ.
* ಅವಶ್ಯಕತೆಗೆ ಅನುಸಾರವಾಗಿ ಬೈಸಿಕಲ್ ಪಥ, ಬಸ್‍ಬೇ, ಆಟೋ ನಿಲ್ದಾಣ, ಇತರೆ ವಾಹನಗಳಿಗೆ ನಿಲುಗಡೆ ಅವಕಾಶ.
* ರಸ್ತೆಯ ಎರಡೂ ಬದಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಲ್‍ಇಡಿ ವಿದ್ಯುತ್ ದೀಪ ಅಳವಡಿಕೆ.
* ರಸ್ತೆ ವಿಭಜಕಗಳಲ್ಲಿ ನಯನಮನೋಹರ ವ್ಯವಸ್ಥೆ ಅಳವಡಿಕೆ.
* ಸೂಚನಾ ಫಲಕ, ಮಾಹಿತಿ ಫಲಕ, ಲೇನ್ ಮಾರ್ಕಿಂಗ್‍ಗಳ ಜೋಡಣೆ.

 

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಂ.ಕೃಷ್ಣಪ್ಪ, ರೋಷನ್‍ಬೇಗ್, ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಶಾಸಕ ಎಚ್.ಎಂ.ರೇವಣ್ಣ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ರಿಜ್ವಾನ್ ಮಹಮ್ಮದ್, ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin