ಅನುಚಿತವಾಗಿ ವರ್ತಿಸಿದ 8 ರಾಜ್ಯಸಭಾ ಸದಸ್ಯರು ಸಸ್ಪೆಂಡ್…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.20-ಕೃಷಿ ವಲಯದ ಎರಡು ಮಸೂದೆಗಳ ಅನುಮೋದನೆ ವೇಳೆ ವಿರೋಧ ಪಕ್ಷಗಳು ನಿನ್ನೆ ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿ ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಅನುಚಿತವಾಗಿ ವರ್ತಿಸಿದ ಕಾರಣ 9 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಇದೇ ವೇಳೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕಾಗಿ ಪ್ರತಿಪಕ್ಷಗಳು ಸಲ್ಲಿಸಿದ್ದ ನೋಟಿಸ್‍ಅನ್ನು ಸಭಾಪತಿ ಡಾ. ಎಂ. ವೆಂಕಯ್ಯನಾಯ್ಡು ತಿರಸ್ಕರಿಸಿದ್ದಾರೆ.

ಈ ಎರಡೂ ವಿದ್ಯಮಾನಗಳಿಂದ ಕುಪಿತಗೊಂಡು ವಿರೋಧ ಪಕ್ಷದ ಸದಸ್ಯರು ಸದನದಲ್ಲಿ ಭಾರೀ ಗದ್ದಲ ಸೃಷ್ಟಿಸಿ ಕಾರಣ ಸದನವನ್ನು ಮೂರು ಬಾರಿ ಮುಂದೂಡಿದ ಪ್ರಸಂಗವೂ ಇಂದು ನಡೆದಿದೆ.  ಕೃಷಿ ಮಸೂದೆಗಳ ಅಂಗೀಕಾರದ ವೇಳೆ ಪ್ರತಿಪಕ್ಷಗಳು ತೋರಿದ ವರ್ತನೆ ಮತ್ತು ಉಪ ಸಭಾಪತಿ ಅವರಿಗೆ ಹಾಕಿದ ಬೆದರಿಕೆ ಕ್ರಮಗಳನ್ನು ಸಭಾಪತಿ ನಾಯ್ಡು ಖಂಡಿಸಿದರು.

ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಟಿಎಂಸಿ ನಾಯಕ ಡೆರೆಕ್ ಓಬ್ರಿಯಾನ್ ಸೇರಿದಂತೆ 8 ಮೇಲ್ಮನೆ ಸದಸ್ಯರನ್ನು ಸದನದಿಂದ ಸಸ್ಪೆಂಡ್ ಮಾಡುವ ನಿರ್ಣಯವನ್ನು ಓದಿದರು. ಬಳಿಕ ಧ್ವನಿ ಮತಗಳ ಮೂಲಕ ಈ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

8 ಸದಸ್ಯರನ್ನು ಸಸ್ಪೆಂಡ್‍ಗೊಳಿಸಿರುವ ಕ್ರಮವನ್ನು ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮಾಡಿ ಸದನದಲ್ಲಿ ಗದ್ದಲ ಉಂಟು ಮಾಡಿದ್ದರಿಂದ ಸಭಾಪತಿ ಅವರು ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರಿದ ಕಾರಣ ಕಲಾಪವನ್ನು ಮತ್ತೆ 30 ನಿಮಿಷ ಮುಂದೂಡಲಾಯಿತು.

ಸದನ ಪುನಃ ಸಮಾವೇಶಗೊಂಡಾಗಲೂ ಗದ್ದಲ ಮರುಕಳಿಸಿದ್ದರಿಂದ ಕಲಾಪವನ್ನು 30 ನಿಮಿಷಗಳ ಕಾಲ 11.07 ನಿಮಿಷದವರೆಗೂ ಮುಂದಕ್ಕೆ ಹಾಕಲಾಯಿತು.

ಕೃಷಿಕರ ಭಾರೀ ಪ್ರತಿಭಟನೆ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಂಸತ್ತಿನ ರಾಜ್ಯಸಭೆಯಲ್ಲಿ ಇಂದು ಮಂಡನೆಯಾದ ಕೃಷಿ ಕ್ಷೇತ್ರದ ಸುಧಾರಣೆಗಳ ಕುರಿತ ಮಸೂದೆಗಳ ಅನುಮೋದನೆ ವಿಚಾರಣೆ ರಾಜ್ಯಸಭೆಯಲ್ಲಿ ಇಂದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ವಿರೋಧ ಪಕ್ಷಗಳ ಸದಸ್ಯರು ಈ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿದ ಘಟನೆ ನಿನ್ನೆ ನಡೆದಿತ್ತು.

ಈ ಮಸೂದೆಗಳಿಗೆ ಅಂಗೀಕಾರ ನೀಡುವುದಕ್ಕೂ ಮುನ್ನ ಪರಿಗಣನೆಗಾಗಿ ಆಯ್ಕೆ ಸಮಿತಿಗೆ ರವಾನಿಸಬೇಕೆಂಬ ತಮ್ಮ ನಿರ್ಣಯದ ಬೇಡಿಕೆಯನ್ನು ಕೇಂದ್ರ ಸರ್ಕಾರ ಮಾನ್ಯ ಮಾಡದ ಕಾರಣ ಕುಪಿತಗೊಂಡ ಕಾಂಗ್ರೆಸ್, ಟಿಎಂಸಿ ಮತ್ತು ಇತರ ಪಕ್ಷಗಳ ಸದಸ್ಯರು ಭಾರೀ ಪ್ರತಿಭಟನೆ ನಡೆಸಿ ಸಭಾಪತಿ ಪೀಠಕ್ಕೆ ಲಗ್ಗೆ ಹಾಕಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಮತ್ತು ವಿರೋಧ ಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ವಾದ-ವಾಗ್ವಾದ ನಡೆದು ಸದನದಲ್ಲಿ ಅಲ್ಲೋಲಕಲ್ಲೋಲ ವಾತಾವರಣ ಸೃಷ್ಟಿಯಾಗಿತ್ತು. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಅನುವು) ಮಸೂದೆ-2020 ಹಾಗೂ ಕೃಷಿಕರ (ಸಬಲೀಕರಣ ಮತ್ತು ರಕ್ಷಣಾ) ದರ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ವಿಧೇಯಕಗಳನ್ನು ಈ ಘಟನೆಗಳ ನಂತರ ಮೇಲ್ಮನೆಯಲ್ಲಿ ಅಂಗೀಕರಿಸಲಾಯಿತು.

Facebook Comments