ಬ್ರೇಕಿಂಗ್ : ರಾಜ್ಯದಲ್ಲಿ ಇಂದು 8 ಮಂದಿಗೆ ಕೊರೊನಾ, 511ಕ್ಕೇರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.27- ನಗರದ 13 ವರ್ಷದ ಬಾಲಕ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ ಎಂಟು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 19ಕ್ಕೇರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 511ಕ್ಕೇರಿಕೆಯಾಗಿದೆ.

ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ಬೆಂಗಳೂರಿನಲ್ಲಿ ಒಬ್ಬರಿಗೆ, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಒಬ್ಬರಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇಬ್ಬರಿಗೆ, ವಿಜಯಪುರದಲ್ಲಿ ಮತ್ತಿಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ 13 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಬಾಲಕನಲ್ಲಿ ಸೋಂಕಿರುವುದು ಸ್ಪಷ್ಟವಾಗಿದೆ. ನಾಗಮಂಗಲದ ಸಾತೇನಹಳ್ಳಿಯಲ್ಲಿ 505 ಸಂಖ್ಯೆಯ ರೋಗಿ ಪತ್ತೆಯಾಗಿದ್ದಾರೆ.

ಮಹಾರಾಷ್ಟ್ರದ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ 50 ವರ್ಷದ ಈ ವ್ಯಕ್ತಿ ಕಳೆದ ಐದು ದಿನಗಳ ಹಿಂದೆ ಮುಂಬೈನಿಂದ ಹಳ್ಳಿಗೆ ವಾಪಸಾಗಿದ್ದರು. ಲಾಕ್‍ಡೌನ್ ಇರುವ ಸಂದರ್ಭದಲ್ಲಿ ಸರಕು-ಸಾಗಾಣಿಕೆಯ ವಾಹನಗಳನ್ನು ಬಳಸಿಕೊಂಡು ಭದ್ರತೆಯ ಕಣ್ತಪ್ಪಿಸಿ ತವರೂರಿಗೆ ಬಂದಿದ್ದಾರೆ.

ಹೊರಗಿನಿಂದ ಬಂದವರಾದ ಕಾರಣ ಸ್ಥಳೀಯ ಆಶಾ ಕಾರ್ಯಕರ್ತರು ಏ.24ರಂದು ಪರೀಕ್ಷೆ ನಡೆಸಿ ಗಂಟಲು ದ್ರವದ ಮಾದರಿ ಪಡೆದಿದ್ದರು. ಈಗ ಅವರಲ್ಲಿ ಸೋಂಕಿರುವುದು ಖಚಿತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಡೀ ಹಳ್ಳಿಯನ್ನೂ ಸೀಲ್‍ಡೌನ್ ಮಾಡಲಾಗಿದೆ. ಸಂಬಂಧಿಕರನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 432ರೊಂದಿಗೆ ಸಂಪರ್ಕದಿಂದ ತಾಯಿ-ಮಗನಿಗೆ ಸೋಂಕು ತಗುಲಿದೆ. 45 ವರ್ಷದ ಮಗ ಮತ್ತು 80 ವರ್ಷದ ತಾಯಿ ಸೋಂಕು ಪೀಡಿತರಾಗಿದ್ದಾರೆ. ಬಾಗಲಕೋಟೆಯಲ್ಲಿ ರೋಗಿ ಸಂಖ್ಯೆ 456ರ ಸಂಪರ್ಕದಿಂದ ಇಬ್ಬರು ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ. ಜಮಖಂಡಿಯಲ್ಲಿ 32 ಮತ್ತು 21 ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿಜಯಪುರದಲ್ಲಿ ರೋಗಿ ಸಂಖ್ಯೆ 221ರ ಸಂಪರ್ಕದಿಂದ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಯುವಕನಲ್ಲೂ ಸೋಂಕು ಕಾಣಿಕೊಂಡಿದೆ. ಆದರೆ ಈ ವ್ಯಕ್ತಿಗೆ ಸೋಂಕು ಹೇಗೆ ಕಾಣಿಸಿಕೊಂಡಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ನಿನ್ನೆ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಈ ಮಹಿಳೆ ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಸೇರಿ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. 466 ಸಂಖ್ಯೆಯ ಈ ಮಹಿಳೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ ಕೊರೊನಾ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕನೊಬ್ಬ ಇಂದು ಬೆಳಗ್ಗೆ ಸೋಂಕಿನಿಂದ ಜಿಗುಪ್ಸೆಗೊಂಡು ಆಸ್ಪತ್ರೆಯ 3ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin