ಬ್ರೆಕಿಂಗ್ : ಕಲಬುರ್ಗಿಗೆ ಕಂಟಕ : ಇಂದು 9 ಮಂದಿಗೆ ಕೊರೋನಾ, 532ಕ್ಕೆ ಏರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.29- ರೆಡ್ ಝೊನ್‍ನಲ್ಲಿರುವ ಬೆಂಗಳೂರಿನಲ್ಲಿ ಇಂದು ಒಂದೇ ಒಂದು ಕೊರೊನಾ ಸೋಂಕು ಪ್ರಕರಣವೂ ಪತ್ತೆಯಾಗಿಲ್ಲ. ಆದರೆ, ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್‍ನಲ್ಲಿ 9 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಸೇರಿದಂತೆ ಎಂಟು ಮಂದಿ ಕಲಬುರಗಿಯವರೇ ಆಗಿದ್ದಾರೆ.

ಇಂದು 9 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ. ಇದುವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 20 ಆಗಿದೆ.  ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ರೋಗಿ ಸಂಖ್ಯೆ 293ರ ಸಂಪರ್ಕದಿಂದ 12 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಅದನ್ನು ಹೊರತುಪಡಿಸಿದರೆ ಉಳಿದವರು ಕಲಬುರಗಿಯವರೇ ಆಗಿರುವುದು ವಿಶೇಷ.

ನಿನ್ನೆ ಕೂಡ ಕಲಬುರಗಿಯಲ್ಲಿ ಆರು ಮಂದಿ ಸೋಂಕಿತರ ಪತ್ತೆಯಾಗಿದ್ದರು. ಈವರೆಗೂ ಕಲಬುರಗಿಯಲ್ಲಿ 52 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅವರಲ್ಲಿ ಐದು ಮಂದಿ ಮೃತ ಪಟ್ಟಿದ್ದರೆ, ಏಳು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದ 40 ಮಂದಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಸೋಂಕಿನಿಂದ ದೇಶದಲ್ಲೇ ಮೊದಲ ಸಾವಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ. ಹಾಗಾಗಿ ತೀವ್ರ ಎಚ್ಚರಿಕೆ ವಹಿಸಿದ್ದ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳಿಂದ ಸೋಂಕು ನಿಯಂತ್ರಣದಲ್ಲಿತ್ತು. ಆದರೆ ತಬ್ಲಿಘೀ ಪ್ರವಾಸಿಗಳಿಂದ ಕಣ್ಣಿಗೆ ಕಾಣದಂತೆ ಮತ್ತೆ ಹರಡಲಾರಂಭಿಸಿದ ಸೋಂಕು ನಿಯಂತ್ರಣ ಮೀರಿದೆ.

ಹೊಸದಾಗಿ ಪತ್ತೆಯಾಗಿರುವ 9 ಮಂದಿ ಪೈಕಿ, ರೋಗಿ ಸಂಖ್ಯೆ 395ರ ಸಂಪರ್ಕದಿಂದ ನಾಲ್ಕೂವರೆ ವರ್ಷದ ಹೆಣ್ಣು ಮಗುವಿಗೆ ಸೋಂಕು ತಗುಲಿದೆ. ರೋಗಿ ಸಂಖ್ಯೆ 515ರ ಸಂಪರ್ಕದಿಂದ 28 ವರ್ಷದ ಯುವಕನಿಗೆ, 425ರ ಸಂಪರ್ಕದಿಂದ 14 ಮತ್ತು 12 ವರ್ಷದ ಇಬ್ಬರು ಬಾಲಕಿಯರಿಗೆ, 17 ವರ್ಷದ ಯುವತಿಗೆ, 40 ವರ್ಷದ ಮಹಿಳೆಗೆ, 205 ಸಂಖ್ಯೆಯ ರೋಗಿಯಿಂದ 22 ಮತ್ತು 20 ವರ್ಷದ ಇಬ್ಬರು ಯುವಕರು ಸೋಂಕು ಅಂಟಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 20ಕ್ಕೆ ಹೆಚ್ಚಾಗಿದೆ. 215 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಬೆಂಗಳೂರಿನಲ್ಲಿ 131 ಮಂದಿಗೆ ಸೋಂಕು ತಗುಲಿತ್ತು, ಅವರಲ್ಲಿ 58 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರೆ, 67 ಮಂದಿ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.

ಐದು ಮಂದಿ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ 87 ಪ್ರಕರಣಗಳ ಪೈಕಿ 48 ಮಂದಿ ಬಿಡುಗಡೆಯಾದರೆ 39 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿಯಲ್ಲಿ 53 ಮಂದಿ ಸೋಂಕಿತರ ಪೈಕಿ ಆರು ಮಂದಿ ಬಿಡುಗಡೆಯಾಗಿದ್ದು, 46 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ.

ವಿಜಯಪುರದಲ್ಲಿ41 ಮಂದಿ ಸೋಂಕಿತರ ಪೈಕಿ ಆರು ಮಂದಿ ಬಿಡುಗಡೆಯಾಗಿ, 33 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ.  ಬಾಗಲಕೋಟೆಯಲ್ಲಿ 29 ಮಂದಿ ಸೋಂಕಿತರ ಪೈಕಿ ಆರು ಮಂದಿ ಬಿಡುಗಡೆಯಾಗಿ 33 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin