ರಾಜ್ಯದಲ್ಲಿ ಇಂದು 8 ಮಂದಿಗೆ ಕೊರೋನಾ ಪಾಸಿಟಿವ್, ದಾವಣಗೆರೆಯಲ್ಲಿ 1 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬ್ರೇಕಿಂಗ್ : ಬೆಂಗಳೂರು, ಮೇ 7-ಕಳೆದ ನಾಲ್ಕು ದಿನಗಳಿಂದ ಅಬ್ಬರಿಸಿದ್ದ ಕೊರೊನಾ ಸೋಂಕು ಗುರುವಾರ ರಾಜ್ಯದಲ್ಲಿ ತುಸು ಇಳಿಮುಖವಾಗಿದ್ದು, ಹೊಸದಾಗಿ 8 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು 701ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ 12 ಗಂಟೆವರೆಗೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ , ಇಂದು ಕೊರೊನಾ ವೈರಸ್ ಸೋಂಕಿನ ಹೊಸ 8 ಪ್ರಕರಣಗಳು ದೃಢಪಟ್ಟಿವೆ.

ಬೆಣ್ಣೆನಗರಿ ದಾವಣಗೆರೆಯಲ್ಲಿ 3, ಗುಲ್ಬರ್ಗದಲ್ಲಿ 3 ಹಾಗೂ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ 55 ವರ್ಷದ ಮಹಿಳೆ(ರೋಗಿ ಸಂಖ್ಯೆ 694)ಯೊಬ್ಬರು ಡಯಾಬಿಟಿಸ್, ರಕ್ತದೊತ್ತಡ ಕಾಯಿಲೆ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದಲೇ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಬೆಳಗ್ಗೆಯಷ್ಟೇ ಮಹಿಳೆಗೆ ಸೋಂಕು ದೃಢಪಟ್ಟಿದ್ದ ಬೆನ್ನಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು 53 ವರ್ಷದ ಮಹಿಳೆಯೊಬ್ಬರಿಗೆ(ರೋಗಿ ಸಂಖ್ಯೆ 695) ಹಾಗೂ 40 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಸದ್ಯ ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ನಿನ್ನೆ ದಾವಣಗೆರೆಯಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿರಲಿಲ್ಲ. ಪುನಃ ಇಂದು ಮೂರು ಪ್ರಕರಣಗಳು ಮರು ಕಳಿಸಿರುವುದು ಜಿಲ್ಲೆಯ ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ.

ಕಲಬುರಗಿಯಲ್ಲಿ ಕೊರೊನಾ ತನ್ನ ಕದಂಬಬಾಹುವನ್ನು ಇನ್ನಷ್ಟು ಚಾಚಿದೆ. 35 ವರ್ಷದ ಪುರುಷನೊಬ್ಬ ರೋಗಿ ಸಂಖ್ಯೆ 642ರ ಸಂಪರ್ಕ ಹೊಂದಿದ್ದಾರೆ. 36 ವರ್ಷದ ಪುರುಷ ರೋಗಿ ಸಂಖ್ಯೆ 641ರ ಸಂಪರ್ಕ ಹೊಂದಿದ್ದರೆ, , 41 ವರ್ಷದ ಪುರುಷನಿಗೆ ರೋಗಿ ಸಂಖ್ಯೆ 641ರ ಸಂಪರ್ಕವಿದದ್ದು ಸಾಬೀತಾಗಿದೆ. ಈ ಮೂವರನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಚಿಕಿತ್ಸೆಗೆ ದಾಖಲಿಸಿದೆ.

ಒಂದೇ ದಿನ 14 ಪ್ರಕರಣಗಳು ಪತ್ತೆಯಾಗಿ ತತ್ತರಿಸಿದ್ದ ಕುಂದಾನಗರಿ ಬೆಳಗಾವಿಯ ಹಿರೇಬಾಗೆವಾಡಿಯಲ್ಲಿ 13 ವರ್ಷದ ಬಾಲಕಿಗೆ ಸೋಂಕು ತಗುಲಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಈಕೆಗೆ ರೋಗಿ ಸಂಖ್ಯೆ 364ರ ಸಂಪರ್ಕ ಹೊಂದಿರುವುದು ಸಾಬೀತಾಗಿದೆ.

ಉಳಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೇವಲ ಒಂದು ಪ್ರಕರಣ ಮಾತ್ರ ಪತ್ತೆಯಾಗಿರುವುದು ಐಟಿ ಸಿಟಿ ಜನತೆಗೆ ತುಸು ನೆಮ್ಮದಿ ತಂದಿದೆ.

ಇನ್ನು ಸಾಂಸ್ಕøತಿಕ ನಗರಿ ಮೈಸೂರು, ಬೀದರ್, ಬಿಜಾಪುರ, ಬಾಗಲಕೋಟೆ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದಿರುವುದು ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವುದರ ಸಂಕೇತ ಎನಿಸಿದೆ.

ಕೊರೊನಾ ಸೊಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಈವರೆಗೆ ರಾಜ್ಯದಲ್ಲಿ 701 ಸೋಂಕಿತರಲ್ಲಿ 363 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Facebook Comments

Sri Raghav

Admin