ಅಷ್ಟ ದಿಕ್ಕುಗಳಿಂದ ಕರ್ನಾಟಕಕ್ಕೆ ವಕ್ಕರಿಸಲಿದೆಯಾ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1-ದೇಶಾದ್ಯಂತ ರೈಲು ಓಡಾಟ ಆರಂಭವಾಗಿದ್ದು, ಸೋಂಕಿತ ರಾಜ್ಯಗಳಿಂದ ಕರ್ನಾಟಕಕ್ಕೆ ಇಂದು ಒಂದೇ ದಿನ ಎಂಟು ರೈಲುಗಳು ಆಗಮಿಸಲಿದ್ದು, ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಮಹಾರಾಷ್ಟ್ರದ ಮುಂಬೈ, ದೆಹಲಿಯಿಂದ ರೈಲುಗಳು ರಾಜ್ಯಕ್ಕೆ ಪ್ರಯಾಣಿಕರನ್ನು ಹೊತ್ತು ಬರಲಿದ್ದು, ಎಷ್ಟು ಸೋಂಕಿತರನ್ನು ಕರೆ ತರಲಿವೆ ಎಂಬ ಆತಂಕ ಎದುರಾಗಿದೆ.

ದೆಹಲಿ -ಬೆಂಗಳೂರು, ಮುಂಬೈ-ಬೆಂಗಳೂರು, ಮುಂಬೈ-ಗದಗ ಸೇರಿದಂತೆ 16 ರೈಲುಗಳು ಆಗಮಿಸಲಿದ್ದು, ಇಂದು ಒಂದೇ ದಿನದ 8 ರೈಲುಗಳಲ್ಲಿ ಪ್ರಯಾಣಿಕರು ಬರಲಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಕ್ವಾರಂಟೈನ್ ಕೇಂದ್ರಗಳು ತುಂಬಿ ತುಳುಕುತ್ತಿವೆ. ಈಗ ಬರುತ್ತಿರುವ ಸಾವಿರಾರರು ಜನರನ್ನು ಕ್ವಾರಂಟೈನ್ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಮುಂಬೈನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 40 ಸಾವಿರಕ್ಕೇರಿದೆ. ದೆಹಲಿಯಲ್ಲೂ ಕೂಡಾ ಸೋಂಕಿತರ ಸಂಖ್ಯೆ ಮಿತಿ ಮೀರಿದೆ.  ಬೇರೆ ಬೇರೆ ರಾಜ್ಯಗಳಿಂದಲೂ ರೈಲುಗಳ ಮೂಲಕ ರಾಜ್ಯಕ್ಕೆ ಜನ ಬರುತ್ತಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಪ್ರಮಾಣದಲ್ಲಿ ಏರುತ್ತದೆಯೇ ಎಂಬ ಭೀತಿ ಕಾಡತೊಡಗಿದೆ.

ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3500ರ ಗಡಿ ದಾಟಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದವರಲ್ಲೇ ಸೋಂಕು ಹೆಚ್ಚಾಗಿರುವುದು ಕಂಡುಬಂದಿದೆ.

ಈಗ ಮತ್ತೆ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಕೊರೋನಾ ಸೋಂಕಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈಗಾಗಲೇ ಲಾಕ್‍ಡೌನ್ ನಿಯಮಗಳನ್ನು ಸಾಕಷ್ಟು ಸಡಿಲಗೊಳಿಸಲಾಗಿದೆ. ಜನ ಸ್ವಯಂ ಜಾಗೃತಿ ವಹಿಸದಿದ್ದರೆ, ಅಪಾಯಕ್ಕೆ ಆಹ್ವಾನ ಕೊಡುವುದು ಕಟ್ಟಿಟ್ಟ ಬುತ್ತಿ.

Facebook Comments