82 ಎಕರೆ 21 ಗುಂಟೆ ಕೆರೆ ಒತ್ತುವರಿ : ಶೀಘ್ರ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಅ.5-ತುರುವೇಕೆರೆ ಕೆರೆಯ ಒತ್ತುವರಿಯನ್ನು ಗುರುತಿಸಲಾಗಿದ್ದು ಸುಮಾರು 82 ಎಕರೆ 21 ಗುಂಟೆ ಕೆರೆ ಒತ್ತುವರಿಯಾದ್ದು ಶೀಘ್ರದಲ್ಲಿಯೇ ತೆರವುಗೊಳಿಸಲಾಗುವುದು ಎಂದು ತಿಪಟೂರು ಉಪ ವಿಭಾಗಧಿಕಾರಿ ಪ್ರಜ್ಞಾ ಅಮ್ಮೆಂಬಳ ತಿಳಿಸಿದರು.ಪಟ್ಟಣದ ಸಮೀಪದ ತೊರೆಮಾವಿನಹಳ್ಳಿ ಬಳಿಯಲ್ಲಿನ ಕೆರೆ ಒತ್ತುವರಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಗುರುತು ಮಾಡಿರುವ ಸ್ಥಳವನ್ನು ವೀಕ್ಷಿಸಿ ಮಾತನಾಡಿದ ಅವರು ಸುಮಾರು 711 ಎಕರೆ 7 ಗುಂಟೆ ಹೊಂದಿರುವ ತುರುವೇಕೆರೆ ಕೆರೆಯನ್ನು 82 ಎಕರೆ 21 ಗುಂಟೆ ಕೆರೆ ಒತ್ತುವರಿಯಾಗಿದೆ. ತುರುವೇಕೆರೆ, ಮಲ್ಲಾಘಟ್ಟ ಅಮಾನಿಕೆರೆ, ತುರುವೇಕೆರೆ ಅಮಾನಿಕೆರೆ ಹಾಗೂ ಗ್ರಾಮಾಂತರ ಗ್ರಾಮಗಳಿಗೆ ಸೇರಿದ ಕೆರೆಯ ಆಸುಪಾಸು ಸುಮಾರು ನೂರಾರು ಒತ್ತುವರಿದಾರರು ಕೆರೆಯನ್ನು ಅಕ್ರಮವಾಗಿ ಆತಿಕ್ರಮಣ ಮಾಡಿ ತೆಂಗು, ರಾಗಿ ಬೆಳೆಯನ್ನಿಟ್ಟಿದ್ದಾರೆ.
ಈ ಹಿಂದೆ ಅತಿಕ್ರಮಣವಾಗಿರುವ ಕೆರೆಯ ಪ್ರದೇಶಕ್ಕೆ ಬೇಟಿ ನೀಡಿ ಪರಿಶೀಲಿಸಿ ತಹಶೀಲ್ದಾರ್‍ರವರಿಗೆ ಒತ್ತುವರಿ ಜಾಗವನ್ನು ಗುರುತು ಮಾಡಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ತುರುವೇಕೆರೆ ಕೆರೆ ಹೇಮಾವತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು. ಹೇಮಾವತಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಕರೆದು ಚರ್ಚಿಸಿದ ನಂತರ ತೆರವುಗೊಳಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸರ್ಕಾರಿ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಲ ರೈತರು ತಮ್ಮ ಗಮನಕ್ಕೆ ಬಾರದೆ ಸರ್ವೆ ಕಾರ್ಯ ನಡೆಯುತ್ತಿದೆ. ನಮಗೆ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ಸಹ ನೀಡಿಲ್ಲ ಎಂದು ಎ.ಸಿ ರವರನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿ ಒತ್ತುವರಿ ಮಾಡಿಕೊಂಡವರಿಗೆ ನೋಟೀಸ್ ನೀಡಲಾಗುವುದಿಲ್ಲಾ, ನಿಮ್ಮ ಜಮೀನು ಎಷ್ಟು ಎಂದು ತಿಳಿದಿರುತ್ತದೆ. ಈಗಾಗಲೇ ಕೆರೆ ಪರಿಶೀಲಿಸಿ ಒತ್ತುವರಿ ಬಗ್ಗೆ ಪತ್ರಿಕೆಗಳ ಮುಖಾಂತರ ಒತ್ತುವರಿದಾರರಿಗೆ ಅರಿವು ಮೂಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ತಹಶೀಲ್ದಾರ್ ಶಿವಲಿಂಗಮೂರ್ತಿ, ಕಂದಾಯ ಅಧಿಕಾರಿ ನಟರಾಜು, ಸರ್ವೆ ಅಧಿಕಾರಿ ಹರಿಕುಮಾರ್, ರಮೇಶ್, ಪ್ರದೀಪ್ ಸೇರಿದಂತೆ ಅನೇಕ ಕಂದಾಯ ಅಧಿಕಾರಿಗಳು ಪಾಲ್ಗೊಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin