83 ವೀರಾಗ್ರಣಿಗಳಿಗೆ ಶೌರ್ಯ ಪ್ರಶಸ್ತಿ, ವೀರನಾರಿ ಕನ್ನಿಕಾಗೆ ಸೇನಾ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

ಉದಾಮ್‍ಪುರ(ಜಮ್ಮು-ಕಾಶ್ಮೀರ), ಫೆ.29-ಭಾರತೀಯ ಸೇನೆಯಲ್ಲಿ ಅಪ್ರತಿಮ ಶೌರ್ಯ ಮತ್ತು ಸಾಹಸದ ಶ್ಲಾಘನೀಯ ಸೇವೆ ನೀಡಿದ 83 ವೀರಾಗ್ರಣಿಗಳಿಗೆ ಗ್ಯಾಲೆಂಟರಿ ಅವಾರ್ಡ್‍ಗಳನ್ನು ನೀಡಲಾಗಿದೆ. ದೇಶ ರಕ್ಷಣೆಯಲ್ಲಿ ಪ್ರಾಣಾರ್ಪಣೆ ಮಾಡಿದ ತಮ್ಮ ಪತಿ ಮೇಜರ್ ಕೌಸ್ತುಭ್ ರಾಣೆ ಅವರ ಹಾದಿಯಲ್ಲಿ ಮುನ್ನಡೆಯಲು ಸೇನೆ ಸೇರಿದ್ದ ಅವರ ವಿಧವಾ ಪತ್ನಿ ಕನ್ನಿಕಾ ರಾಣೆ ಅವರಿಗೆ ಸೇನೆ ಪದಕ ಲಭಿಸಿದೆ.

ಜಮ್ಮು ಮತ್ತು ಕಾಶ್ಮೀರದ ಉದಾಮ್‍ಪುರದ ನಾರ್ತನ್ ಕಮಾಂಡ್‍ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕಾರ್ಗಿಲ್ ಹೀರೋ ಮತ್ತು ಈ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಷಿ ಒಟ್ಟು 83 ಮಂದಿಗೆ ಶೌರ್ಯ ಮತ್ತು ಶ್ಲಾಘನೀಯ ಸೇವಾ ಪ್ರಶಸ್ತಿಗಳು ಮತ್ತು 9 ವೀರನಾರಿ ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ಸೇನಾ ಪದಕ ಪಡೆದವರಲ್ಲಿ ಮಿಲಿಟರಿ ಅಧಿಕಾರಿ ಕನ್ನಿಕಾರಾಣೆ ಸಹ ಒಬ್ಬರು. ಇವರ ಪತಿ ಮೇಜರ್ ಕೌಸ್ತುಭ್ ರಾಣೆ 2018ರ ಆಗಸ್ಟ್‍ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ವೇಳೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದರು.

ಬಾಲ್ಯದಿಂದಲೂ ಭಾರತೀಯ ಸೇನಾ ಪಡೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಕನ್ನಿಕಾರಾಣೆ ಯೋಧನನ್ನೇ ಮದುವೆಯಾಗಬೇಕೆಂಬ ಉದ್ದೇಶದಿಂದ ಕೌಸ್ತುಭ್ ಅವರನ್ನು ಮದುವೆಯಾಗಿದ್ದರು. ಈ ದಂಪತಿ ಅಪ್ಪಟ ದೇಶ ಪ್ರೇಮಿಗಳು.  ದೇಶ ರಕ್ಷಣೆಯಲ್ಲಿ ಹುತಾತ್ಮರಾದ ತಮ್ಮ ಪತಿಯ ರಾಷ್ಟ್ರ ಸೇವೆಯ ಆಕಾಂಕ್ಷೆಯನ್ನು ಈಡೇರಿಸುವ ಉದ್ದೇಶದಿಂದ ಕನ್ನಿಕಾ ಸೇನೆ ಸೇರಿ ಭಾರತಾಂಬೆ ಸೇವೆ ಸಲ್ಲಿಸಲು ಇಚ್ಛಿಸಿದರು.

29 ವರ್ಷದ ಇವರು ಸೇವಾ ಆಯ್ಕೆ ಮಂಡಳಿ (ಎಸ್‍ಎಸ್‍ವಿ) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿ ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗಿ ಭಾರತದ ಸೇನೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಇಂಡಿಯನ್ ಆರ್ಮಿಗೆ ಸೇರಿದ ಕೇವಲ ಒಂದೇ ವರ್ಷದಲ್ಲಿ ಇವರ ಶ್ಲಾಘನೀಯ ಸೇವೆ ಮತ್ತು ಶೌರ್ಯವನ್ನು ಪ್ರಶಂಸಿಸಿ ಸೇನಾ ಪದಕ ನೀಡಿ ಗೌರವಿಸಲಾಗಿದೆ.

ಕನ್ನಿಕಾ ಅವರ ರಾಷ್ಟ್ರಪ್ರೇಮ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ಸೇನೆಗೆ ಸೇರಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಕನ್ನಿಕಾ ಅವರ ದಿಟ್ಟತನ ಅನುಕರಣೀಯ.

Facebook Comments