SHOCKING : ಕರ್ನಾಟಕದಲ್ಲಿ ಇಂದು ಬರೋಬ್ಬರಿ 84 ಮಂದಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 18- ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನ 84 ಪ್ರಕರಣಗಳು ಪತ್ತೆಯಾಗುವ ಮೂಲಕ ಕಳೆದ 55 ದಿನಗಳಿಗೆ ಹೋಲಿಸಿದರೆ ಇಂದು ಅತಿ ಹೆಚ್ಚು ಪ್ರಕರಣಗಳು ದಾಖಲಾಗಿ ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ.

ಸೋಂಕಿತ 84 ಜನರಲ್ಲಿ 54 ಮಂದಿ ಮಹಾರಾಷ್ಟ್ರದ ಮುಂಬೈನಿಂದ ಹಿಂದಿರುಗಿದವರೇ ಆಗಿದ್ದಾರೆ. 10 ವರ್ಷದೊಳಗಿನ 10 ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕವನ್ನು ದ್ವಿಗುಣಗೊಳಿಸಿದೆ.

ನಿನ್ನೆ ಸಂಜೆ ಐದು ಗಂಟೆಯಿಂದ ಇಂದು ಬೆಳಗ್ಗೆ 12 ಗಂಟೆಯವರೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲಿ 18, ಮಂಡ್ಯದಲ್ಲಿ 17, ರಾಯಚೂರು-6, ಹಾಸನ-4, ಕೊಪ್ಪಳ-3, ಗದಗ-5, ಕಲಬುರಗಿ-6, ಯಾದಗಿರಿ-5, ಉತ್ತರ ಕನ್ನಡ-8, ಬೆಳಗಾವಿ-2, ಬಳ್ಳಾರಿ, ದಾವಣಗೆರೆ, ಬೀದರ್, ಕೊಡಗು, ಮೈಸೂರು ತಲಾ ಒಂದು ಪ್ರಕರಣಗಳು ಪತ್ತೆಯಾಗುವ ಮೂಲಕ ಇಂದು ಕೋವಿಡ್-19 ಸೋಂಕಿತರ ಪ್ರಕರಣ 84ಕ್ಕೆ ತಲುಪಿ ಆತಂಕ ಸೃಷ್ಠಿಸಿದೆ.

ಒಟ್ಟಾರೆ 1231 ಪ್ರಕರಣಗಳಲ್ಲಿ 521 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 672 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ 37 ಮಂದಿ ಮೃತಪಟ್ಟಿದ್ದಾರೆ.

ಹಾಸನದಲ್ಲಿ 17 ವರ್ಷದ ಯುವಕ, 40 ವರ್ಷದ ಮಹಿಳೆ, 34 ವರ್ಷದ ಪುರುಷ, 29 ವರ್ಷದ ಮಹಿಳೆ ಈ ನಾಲ್ವರು ಕೂಡ ಮಹಾರಾಷ್ಟ್ರದ ಮುಂಬೈನಿಂದ ಹಿಂದಿರುಗಿದ್ದು ಇವರಿಗೆ ಸೋಂಕು ತಗುಲಿದ್ದು ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರಿನ ಮೂವರು ಮಹಿಳೆಯರು ಹಾಗೂ ಮೂವರು ಪುರುಷರಿಗೆ ಸೋಂಕು ತಗುಲಿದ್ದು ಎಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಹಿಂದಿರುಗಿದವರೇ ಆಗಿದ್ದಾರೆ. ಇವರಲ್ಲಿ ಒಬ್ಬರು ಮಾತ್ರ ಸೋಲಾಪುರದಿಂದ ಹಿಂದಿರುಗಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿ ಮತ್ತೆ 16 ಮಂದಿ ಕೊರೋನಾ ಸೋಂಕು ತಗುಲಿದ್ದು ಎಲ್ಲರಿಗೂ ರೋಗಿ ನಂ.653ರ ದ್ವಿತೀಯ ಸಂಪರ್ಕದಿಂದಲೇ ಈ ರೋಗ ಅಂಟಿಕೊಂಡಿದೆ. ಇನ್ನುಳಿದಂತೆ ಇಬ್ಬರಲ್ಲಿ ಒಬ್ಬರು ಚೆನ್ನೈಗೆ ಪ್ರಯಾಣ ಮಾಡಿದ್ದ ಹಿನ್ನೆಲೆಯಲ್ಲಿ ಹಾಗೂ ನೆಲಮಂಗಲದ ದಾಬಸ್‍ಪೇಟೆಗೆ ಪ್ರಯಾಣ ಮಾಡಿದ ಹಿನ್ನೆಲೆ ಸೋಂಕು ತಗುಲಿದೆ.

ಗದಗದ 30 ವರ್ಷದ ವ್ಯಕ್ತಿಗೆ ಚೆನ್ನೈನಿಂದ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ರೋಗ ತಗುಲಿದರೆ ಮತ್ತೆ 33 ಮತ್ತು 58 ವರ್ಷದ ವ್ಯಕ್ತಿಗೆ ರೋಗಿ ನಂ.913ರ ಸಂಪರ್ಕದಿಂದ ರೋಗ ತಗುಲಿದೆ.32 ವರ್ಷದ ಮತ್ತು 12 ವರ್ಷದ ಬಾಲಕ ಈ ಇಬ್ಬರಿಗೆ ಕಂಟೈನ್ಮೆಂಟ್ ಝೋನ್‍ನ ಸಂಪರ್ಕದಿಂದ ರೋಗ ತಗುಲಿದೆ.

ಜಯಪುರದ 10 ವರ್ಷದ ಬಾಲಕ, 20 ವರ್ಷದ ಮಹಿಳೆ ಮುಂಬೈನಿಂದ ಬಂದ ಹಿನ್ನೆಲೆಯಲ್ಲಿ ಈ ಕಾಯಿಲೆ ಬಂದಿದೆ. ಬಳ್ಳಾರಿಯ 61 ವರ್ಷದ ವೃದ್ಧನನ್ನು ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯ 24 ವರ್ಷದ ವ್ಯಕ್ತಿ ಮಹಾರಾಷ್ಟ್ರದ ಸೊಲ್ಲಾಪುರದಿಂದ ಹಿಂದಿರುಗಿದ್ದು ಆತನಿಗೂ ಸೋಂಕು ಬಂದಿದೆ. ಕಲಬುರಗಿಯಲ್ಲಿ 6 ತಿಂಗಳ ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ತಗುಲಿದ್ದು ಈ ಎಲ್ಲರೂ ಕೂಡ ಮುಂಬೈನಿಂದ ಹಿಂದಿರುಗಿದವರಾಗಿದ್ದಾರೆ.

ಯಾದಗಿರಿಯಲ್ಲಿ ಸೋಂಕು ತಗುಲಿದ 15 ವರ್ಷದ ಬಾಲಕ ಸೇರಿದಂತೆ ಐವರೂ ಕೂಡ ಮುಂಬೈನಿಂದ ಹಿಂದಿರುಗಿದವರೇ ಆಗಿದ್ದಾರೆ. ಬೀದರ್‍ನಲ್ಲಿ 13 ವರ್ಷದ ಬಾಲಕನಿಗೆ ತಗುಲಿರುವ ಸೋಂಕು 939ರ ರೋಗಿ ಸಂಪರ್ಕದಿಂದ ಬಂದಿದೆ.

ಉತ್ತರ ಕನ್ನಡದ 8 ಮಂದಿಯಲ್ಲಿ 7 ಮಂದಿಯಲ್ಲಿ ಕೊರೋನಾ ಸೋಂಕು ಅಂಟಿಕೊಂಡಿರುವುದು ಮುಂಬೈನಿಂದ ಹಿಂದಿರುಗಿರುವ ಹಿನ್ನೆಲೆಯಲ್ಲಿ. ಮತ್ತೊಂದು 2 ವರ್ಷದ ಮಗುವಿಗೆ ರೋಗಿ ನಂ.659ರ ಸಂಪರ್ಕದಿಂದ ಬಂದಿದೆ.

ಕೊರೋನಾ ಮುಕ್ತವಾಗಿದ್ದ ಮೈಸೂರಿನಲ್ಲಿ ಮತ್ತೆ ಕೊರೋನಾ ಕಾಣಿಸಿಕೊಂಡಿದ್ದು ಮುಂಬೈನಿಂದ ಹಿಂದಿರುಗಿದ 46 ವರ್ಷದ ವ್ಯಕ್ತಿಯಲ್ಲಿ ಈ ರೋಗ ಕಂಡು ಬಂದಿದೆ. ಬೆಳಗಾವಿಯಲ್ಲಿ 23 ವರ್ಷದ ವ್ಯಕ್ತಿಗೆ 575ರ ಸಂಪರ್ಕದಿಂದ ರೋಗ ಅಂಟಿಕೊಂಡಿದೆ. 23 ವರ್ಷದ ಮಹಿಳೆ ಮುಂಬೈನಿಂದ ಹಿಂದಿರುಗಿದವರಾಗಿದ್ದಾರೆ. ಸೋಂಕಿತ ಮಂಡ್ಯದ 17 ಮಂದಿ ಕೂಡ ಮುಂಬೈನಿಂದ ಹಿಂದಿರುಗಿದವರಾಗಿದ್ದಾರೆ.

Facebook Comments

Sri Raghav

Admin