84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Kannada-Sahitya-Sammelana
ಧಾರವಾಡ. ನ.17: ಡಿ. 4 ರಿಂದ 6ರ ವರೆಗೆ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವ ಸಿದ್ಧತಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ನಡೆಯಿತು.  ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಸಮ್ಮೇಳನದ ತಯಾರಿಗಳ ‌ಬಗ್ಗೆ ಚರ್ಚೆ ನಡೆಸಿದರು. ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲರೂ ಶ್ರಮಿಸಬೇಕು. ಸಮ್ಮೇಳನಕ್ಕೆ ಸಮಯ ಕಡಿಮೆ‌ ಇರುವುದರಿಂದ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ‌ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಿ, ಧಾರವಾಡ ಸಾಹಿತ್ಯ ಸಮ್ಮೇಳನ ಇತಿಹಾಸದ‌ ಪುಟ ಸೇರುವ ರೀತಿಯಲ್ಲಿ ಮಾಡಬೇಕೆಂದು ಮನವಿ ಮಾಡಿದರು.

ಇನ್ನು ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ 16 ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿಳಿಸಿದರು. ಸಭೆಯಲ್ಲಿ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನದ ಸ್ಥಳದ ಬಗ್ಗೆ ಚರ್ಚೆ ನಡೆಯಿತು. ಸಾಹಿತಿಗಳು ಸ್ಥಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಸ್ಥಳದ ನಿರ್ಧಾರವನ್ನು ಮಾಡಿದರೆ ಒಳ್ಳೆಯದ್ದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ‌ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಕ್ತ ಸ್ಥಳ ನಿಗದಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಇದೇ ವೇಳೆ ಅಖಿಲ ಭಾರತೀಯ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಮತ್ತು ವೆಬ್ ‌ಸೈಟ್ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದರು. ಲಾಂಛನವನ್ನು ಕಲಾವಿದ ಮಹೇಶ್ ಪತ್ತಾರ್ ಅವರು ರಚಿಸಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಕೆಸಿಡಿ, ಕವಿವಿ ಮತ್ತು ಚನ್ನಮ್ಮ ಪ್ರತಿಮೆವುಳ್ಳ ಲಾಂಛನ ಇದಾಗಿದೆ. ಸಭೆಯಲ್ಲಿ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪ್ರದೀಪ್ ಶೆಟ್ಟರ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರು, ಸಿಇಒ ಬಿ.ಎಸ್.ಸತೀಶ ಸೇರಿದಂತೆ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

Facebook Comments