88ನೇ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Mahamastakaabhisheka--014

ಶ್ರವಣಬೆಳಗೊಳ, ಫೆ.7-ವಿಶ್ವಶಾಂತಿಯ ಸಂದೇಶ ಬಿತ್ತಿದ ಭಗವಾನ್ ಬಾಹುಬಲಿ ಬೃಹತ್ ಮೂರ್ತಿಗೆ ನಡೆಯುವ 88ನೇ ಮಹಾಮಸ್ತಕಾಭಿಷೇಕಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದರು. 12 ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಜ್ಜನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು, ಇದೇ 26ರವರೆಗೂ ನಡೆಯಲಿದೆ.  ಶ್ರವಣಬೆಳಗೊಳದಲ್ಲಿ ನಿರ್ಮಿಸಲಾಗಿರುವ ಚಾವುಂಡರಾಯ ವೇದಿಕೆಯಲ್ಲಿ ನಿರಂತರವಾಗಿ 19 ದಿನಗಳ ಕಾಲ ನಡೆಯಲಿರುವ ಮಹಾಮಜ್ಜನದ ಸಂಭ್ರಮಕ್ಕೆ ರಾಷ್ಟ್ರಪತಿ ಅವರಿಂದ ಅಧಿಕೃತ ಚಾಲನೆ ದೊರೆತಿದೆ.

ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಿ.ಆರ್.ವಾಲಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಎಸ್‍ಬಿಜಿಎಫ್‍ಐ ಸಮಿತಿಯ ಮುಖ್ಯಸ್ಥರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಶ್ರೀ 108 ವರ್ಧಮಾನ ಸಾಗರ ಮುನಿರಾಜ ಮಹಾರಾಜ ಸ್ವಾಮೀಜಿ ಮತ್ತಿತರರು ಪಾಲ್ಗೊಂಡು ಮಹಾಮಸ್ತಕಾಭಿಷೇಕದ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕಳೆ ಕಟ್ಟಿದ್ದರು. ಇಂದಿನಿಂದ ಆರಂಭಗೊಂಡಿರುವ ಉತ್ಸವದ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ ಮೂರ್ತಿಗೆ ಪೂಜೆ, ಹೋಮ, ಹವನ, ಭಜನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Mahamastakaabhisheka--003

ನಾಳೆಯಿಂದ 16ರವರೆಗೆ ಜೈನ ಸಂಪ್ರದಾಯದಲ್ಲಿ ವಿಶಿಷ್ಟವಾದ ಪಂಚ ಕಲ್ಯಾಣ ಮಹೋತ್ಸವ ನೆರವೇರಲಿದ್ದು, ಈ ಮಹೋತ್ಸವದ ಪ್ರಮುಖ ಘಟ್ಟವಾದ ಮೊದಲ ಮಸ್ತಕಾಭಿಷೇಕ ಫೆ.17 ರಂದು ಸಂಪನ್ನಗೊಳ್ಳಲಿದೆ. 18 ರಿಂದ ಪ್ರತಿದಿನ 1008 ಕಳಶಗಳ ಅಭಿಷೇಕವನ್ನು ಬಾಹುಬಲಿ ವಿರಾಟ್ ಮೂರ್ತಿಗೆ ನೆರವೇರಿಸಲಾಗುತ್ತಿದ್ದು, 26ರಂದು ಸಮಾರೋಪ ನಡೆಯಲಿದೆ.  ವಿಂಧ್ಯಾಗಿರಿ ಬೆಟ್ಟದ ಮೇಲೆ ಏಕಕಾಲಕ್ಕೆ 4ಸಾವಿರಕ್ಕೂ ಹೆಚ್ಚು ಮಂದಿ ಈ ಉತ್ಸವ ಕಣ್ತುಂಬಿಕೊಳ್ಳಲು ಅನುವಾಗುವಂತೆ ವಿಶೇಷ ಅಟ್ಟಣಿಗೆಯನ್ನು ನಿರ್ಮಿಸಲಾಗಿದೆ.

Mahamastakaabhisheka--005

ಮಹೋತ್ಸವದಲ್ಲಿ ದೇಶಾದ್ಯಂತ ಇರುವ ಯತಿವರೇಣ್ಯರು ಪಾಲ್ಗೊಳ್ಳುತ್ತಿದ್ದು, ಅವರ ವಾಸ್ತವ್ಯಕ್ಕಾಗಿ ಹಾಗೂ ದೇಶ -ವಿದೇಶದಿಂದ ಆಗಮಿಸುವ ಗಣ್ಯರು, ಭಕ್ತಾದಿಗಳಾಗಿ ಉಪನಗರಗಳ ನಿರ್ಮಾಣವನ್ನೇ ಮಾಡಲಾಗಿದ್ದು, ಮಹಾಮಜ್ಜನಕ್ಕಾಗಿ ಎಲ್ಲಾ ರೀತಿಯ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಕಳೆದ ತಿಂಗಳಿನಿಂದಲೇ ಋಷಿಮುನಿಗಳು ವಾಸ್ತವ್ಯ ಹೂಡಿ ಮಹಾಮಜ್ಜನಕ್ಕೆ ಸಿದ್ಧತೆ ನಡೆಸಿದ್ದು, ಇಂದು ಭಕ್ತರ ಸಮ್ಮುಖದಲ್ಲಿ ಬಾಹುಬಲಿಯ ಮಹಾಮಜ್ಜನಕ್ಕೆ ಚಾಲನೆ ದೊರೆತಿದೆ.

Mahamastakaabhisheka--016

ನಾಳೆ ಗರ್ಭಕಲ್ಯಾಣ ಮಹೋತ್ಸವ, 9 ರಂದು ಜನ್ಮಕಲ್ಯಾಣ, 10 ರಂದು ರಾಜ್ಯಾಭಿಷೇಕ ಮತ್ತು ದೀಕ್ಷಾ ಕಲ್ಯಾಣ, 11 ರಂದು ಕೇವಲ ಜ್ಞಾನ ಕಲ್ಯಾಣ, ಸಮವಸರಣ ಪೂಜಾ, 12 ಪಂಚಪರಮೇಷ್ಠಿ ಆರಾಧನಾ, 13 ರಂದು ತೀರ್ಥಂಕರ ಆರಾಧನಾ, 14 ಗಣಧರವಲಯ ಆರಾಧನಾ, 16 ಜಿನಗುಣ ಸಂಪತ್ತಿ ವಿಧಾನ ಮತ್ತು ವಿಂಧ್ಯಾಗಿರಿ ಸುತ್ತಲು ರಾಷ್ಟ್ರೋತ್ಸವ ಕಾರ್ಯಕ್ರಮ ನೆರವೇರಲಿದ್ದು, 17 ಮೋಕ್ಷ ಕಲ್ಯಾಣ, 108 ಕಳಶಗಳ ಮಹಾಮಸ್ತಕಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಲಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಸಬಿತಾ ರಾಮನಾಥ್ ಕೋವಿಂದ್, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ , ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯರಾದ ಗೋವಿಂದ್, ಶಾಸಕರಾದ ಎಚ್.ಎಸ್.ಪ್ರಕಾಶ್, ಬಾಲಕೃಷ್ಣ , ಕೆ.ಎಂ.ಶಿವಲಿಂಗೇಗೌಡ, ಎಂಎಲ್‍ಸಿಗಳಾದ ಎಂ.ಎ.ಗೋಪಾಲಸ್ವಾಮಿ, ಶ್ರೀಕಂಠೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಮಸ್ತಕಾಭಿಷೇಕ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಸರಿತಾ ಎಂ.ಕೆ ಜೈನ್ ಸೇರಿದಂತೆ ಹಲವಾರು ಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈರಾಗ್ಯಮೂರ್ತಿಯ ದರ್ಶನ ಪಡೆದರು.

ಅಚ್ಚುಕಟ್ಟು ವ್ಯವಸ್ಥೆ :
ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಜ್ಜನಕ್ಕಾಗಿ ಶ್ರವಣ ಬೆಳಗೊಳದ ಗೊಮ್ಮಟ ನಗರದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದೆ. ಉಪನಗರಗಳನ್ನು ನಿರ್ಮಿಸುವ ಮೂಲಕ ಅಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳಲು ವಾಸ್ತವ್ಯ ಹೂಡುವ ಎಲ್ಲರಿಗೂ ಅನುಕೂಲವಾಗುವಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ದೇಶ-ವಿದೇಶಗಳಿಂದಲೂ ಈ ಉತ್ಸವವನ್ನು ಕಣ್ಮನ ತುಂಬಿಕೊಳ್ಳಲು ಆಗಮಿಸಿರುವ ಭಕ್ತಾದಿಗಳು, ಯಾತ್ರಾರ್ಥಿಗಳು, ಜೈನಮುನಿಗಳು ಸಾಗರೋಪಾದಿಯಲ್ಲಿ ಕ್ಷೇತ್ರದಲ್ಲಿ ನೆಲೆಸಿದ್ದಾರೆ.  ಎಲ್ಲಿಯೂ ಇಷ್ಟೊಂದು ಜನರಿಗೆ ನೀರು, ವಸತಿ ಸೇರಿದಂತೆ ಇನ್ನಿತರ ಯಾವುದೆ ಲೋಪವಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದ್ದು , ಜರ್ಮನ್ ಟೆಕ್ನಾಲಜಿ ಬಳಸಿ ಗೊಮ್ಮಟೇಶ್ವರನ ವಿರಾಟ್ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಅಟ್ಟಣಿಗೆಯನ್ನು ಸಿದ್ದಗೊಳಿಸಲಾಗಿದೆ.

Facebook Comments

Sri Raghav

Admin