ರಾಜ್ಯಾದ್ಯಂತ ನಾಳೆ ‘8 ಎಂಎಂ’ ಚಿತ್ರ ರಿಲೀಸ್, ಜಗ್ಗೇಶ್’ಗೆ ಬ್ರೇಕ್ ಕೊಡುತ್ತಾ ಹೊಸ ಪಾತ್ರ..?

ಈ ಸುದ್ದಿಯನ್ನು ಶೇರ್ ಮಾಡಿ

8MM--01

ಬೆಳ್ಳಿ ಪರದೆ ಮೇಲೆ ತನ್ನ ಹಾಸ್ಯ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಂತಹ ಜಗ್ಗೇಶ್ ಈಗ ಒಂದು ವಿಭಿನ್ನ ಮೈಂಡ್ ಗೇಮಿಂಗ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿರುವ ಬಾಂಡ್ ಶೈಲಿಯ ಚಿತ್ರ 8ಎಂ.ಎಂ. ಸಾನ್ವಿ ಪ್ರೋಡಕ್ಷನ್ಸ್ ಹಾಗೂ ಹರಿಚರಣ್ ಆಟ್ರ್ಸ್ ಮೂಲಕ ಈ ಚಿತ್ರವನ್ನು ಇನ್‍ಫ್ಯಾಂಟ್ ಪ್ರದೀಪ್, ಸಲೀಂ ಷಾ ಮತ್ತು ನಾರಾಯಣ ಸ್ವಾಮಿ ಎಂಬ ಮೂವರು ಸ್ನೇಹಿತರು ಬಂಡವಾಳ ಹಾಕಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಎಸ್.ಹರಿಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಒಬ್ಬ ಕ್ರಿಮಿನಲ್ ಮತ್ತು ಪೋಲಿಸ್ ನಡುವೆ ನಡೆಯುವ ಒಂದು ಹೊಸ ರೀತಿಯ ಮೈಂಡ್‍ಗೇಮ್ ಕಥೆ ಈ ಚಿತ್ರದಲ್ಲಿದೆ. ಜಪಾನಿ ಭಾಷೆಯ ಸಿನಿಮಾದ ಸಣ್ಣ ಎಳೆ ಇಟ್ಟುಕೊಂಡು ಈ ಚಿತ್ರದ ಚಿತ್ರಕಥೆಯನ್ನು ನಿರ್ದೇಶಕ ಹರಿಕೃಷ್ಣ ಅವರು ಬಹು ಸುಂದರವಾಗಿ ಹೆಣೆದಿದ್ದಾರೆ. ಹೊಸ ಹುಡುಗರ ತಂಡವೊಂದು ಹೊಸತನದ ಕಥೆ ಇಟ್ಟುಕೊಂಡು 8 ಎಂಎಂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದೆ. ನಟ ಜಗ್ಗೇಶ್ ಅವರು ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವಯಸ್ಸಿಗೆ ತಕ್ಕಂತಹ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷವಾಗಿದೆ.

ಟಗರು ಖ್ಯಾತಿಯ ನಟ ವಸಿಷ್ಟ ಸಿಂಹ ಈ ಚಿತ್ರದಲ್ಲಿ ಒಬ್ಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಅವರು ಈ ಚಿತ್ರದ ಪಾತ್ರಕ್ಕಾಗಿಯೇ ತಮ್ಮ ಗಡ್ಡವನ್ನು ತೆಗೆಸಿಕೊಂಡಿದ್ದಾರೆ. ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಈ ಚಿತ್ರದಲ್ಲಿ ಒಬ್ಬ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. 5 ಸಾಹಸ ದೃಶ್ಯಗಳು ಹಾಗೂ 4 ಹಾಡುಗಳು ಈ ಚಿತ್ರದಲ್ಲಿವೆ. ನಾಯಕನಟ ಜಗ್ಗೇಶ್ ಅವರು ಒಂದು ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಈ ಚಿತ್ರಕ್ಕೆ ವಿನ್ಸೆಂಟ್ ಅವರ ಛಾಯಾಗ್ರಹಣ, ಜೂಡಾ ಸ್ಯಾಂಡಿ ಅವರ ಸಂಗೀತದ ಸಾರಥ್ಯವಿದೆ. ವಿನೂತನ ಪ್ರಯೋಗಾತ್ಮಕ ಚಿತ್ರಗಳು ಸಾಲುಸಾಲಾಗಿ ಬರುತ್ತಿದ್ದು, ಆ ಸಾಲಿಗೆ 8ಎಂ.ಎಂ. ಚಿತ್ರ ಕೂಡ ಸೇರ್ಪಡೆಯಾಗಿದೆ ಎನ್ನಬಹುದು. ಇನ್ನೇನಿದ್ದರೂ ನವರಸ ನಾಯಕ ಜಗ್ಗೇಶ್ ಅವರ ಹೊಸ ವರಸೆಯನ್ನು ತೆರೆ ಮೇಲೆ ನೋಡಬೇಕಿದೆ.

Facebook Comments

Sri Raghav

Admin