9ನೇ ಅಕ್ಕ ಸಮ್ಮೇಳನಕ್ಕೆ ಭರದ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Akka

ಬೆಂಗಳೂರು,ಆ.15- ಅಟ್ವಾಂಟಿಕ್ ನಗರದಲ್ಲಿ ಕನ್ನಡದ ಕಹಳೆ ಮೊಳಗಲು ಕ್ಷಣಗಣನೆ ಆರಂಭಗೊಂಡಿದ್ದು, 9ನೇ ಅಕ್ಕ ವಿಶ್ವಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ತಾರೆಗಳು, ಕಲಾವಿದರು, ಸಾಹಿತಿಗಳು, ಗಣ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಕನ್ನಡದ ಮನಸ್ಸುಗಳನ್ನು ಹೃದಯ ಸ್ಪರ್ಶಿಯಾಗಿ ಬರಮಾಡಿಕೊಳ್ಳಲು ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಸ್ಥ ಪುನೀತ್ ವೆಂಕಟೇಶ್ ಅವರು ಸಿದ್ಧತೆ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.  ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016ರ ಆತಿಥ್ಯ ತಂಡದಲ್ಲಿ 50ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರಿದ್ದಾರೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬ ಗಣ್ಯರನ್ನು ಪ್ರೀತ್ಯಾಧರಗಳಿಂದ ನಡೆಸಿಕೊಂಡು ಈ ಸಮ್ಮೇಳನವನ್ನು ಸ್ಮರಣೀಯಗೊಳಿಸುವ ಬಯಕೆ ನಮ್ಮದಾಗಿದೆ ಎಂದು ಪುನೀತ್ ತಿಳಿಸಿದ್ದಾರೆ.

ಅತಿಥಿಗಳು ಹಾಗೂ ಗಣ್ಯರಿಗೆ ವಸತಿ, ಸಂಚಾರ ವ್ಯವಸ್ಥೆ, ಸಮ್ಮೇಳನದ ಸ್ಥಳದಲ್ಲಿ ಮಾಹಿತಿ ಕೇಂದ್ರ, ಪ್ರಥಮ ಚಿಕಿತ್ಸಾ ವ್ಯವಸ್ಥೆಗಳು, ಸಮೀಪದ ಆಸ್ಪತ್ರೆ ಹಾಗೂ ಔಷಧಾಲಯಗಳ ಬಗ್ಗೆ ಮಾಹಿತಿ, ರಸ್ತೆಗಳ ಬಗ್ಗೆ ಮಾಹಿತಿ ಎಲ್ಲಾದರೂ ಸಂಚಾರದ ಅಡಚಣೆ ಇದ್ದಲ್ಲಿ ಸಮ್ಮೇಳನದ ಸ್ಥಳಕ್ಕೆ ತಲುಪಲು ಪರ್ಯಾಯ ಮಾರ್ಗಗಳ ವಿವರ, ಪ್ರಾಕೃತಿಕ ವಿಕೋಪಗಳೇನಾದರೂ ಸಂಭವಿಸಿದ ಪಕ್ಷದಲ್ಲಿ ನೋಂದಾವಣಿ ತಂಡದ ಜತೆಗೂಡಿ ಸಂಪರ್ಕ ವ್ಯವಸ್ಥೆಗಳ ಉಸ್ತುವಾರಿ, ಸ್ಥಳೀಯ ಪ್ರೇಕ್ಷಣೀಯ ವಿಷಯಗಳ ಬಗ್ಗೆ ಮಾಹಿತಿ, ವಿಮಾನ ನಿಲ್ದಾಣ ಹಾಗೂ ಪ್ರಮುಖ ಹೋಟೆಲ್‍ಗಳಿಂದ ಸಮ್ಮೇಳನದ ಸ್ಥಳಕ್ಕೆ ಸೀಮಿತ ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸ್ವಯಂ ಸೇವಕರು ಸಹಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಒಟ್ಟಿನಲ್ಲಿ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ತಂಡದ ಪ್ರತಿಯೊಬ್ಬ ಸದಸ್ಯರೂ ಹುರುಪಿನಿಂದ ಕೆಲಸ ನಿರ್ವಹಿಸಲಿದ್ದು, ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ತಂಡಗಳನ್ನು ರಚಿಸಲಾಗಿದೆ. ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ http://www.akkaonline.org/2016/hospitality/airport-transportation   ಜಾಲ ತಾಣದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದರು.

Facebook Comments

Sri Raghav

Admin