ಶ್ರೀಲಂಕಾ ಸ್ಪೋಟದಲ್ಲಿ ಮೃತಪಟ್ಟ ಕನ್ನಡಿಗರ ಸಂಖ್ಯೆ 9ಕ್ಕೇರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.23-ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಬಾಂಬ್ ಸ್ಫೋಟದ ಘಟನೆಯಲ್ಲಿ ರಾಜ್ಯದ 9 ಮಂದಿ ಮೃತಪಟ್ಟಿದ್ದಾರೆ. ನಿನ್ನೆಯವರೆಗೆ ಐದು ಮಂದಿ ಮಾತ್ರ ಮೃತಪಟ್ಟಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಂದು ಬೆಳಗ್ಗೆ ವೇಳೆಗೆ ರಾಜ್ಯದ 9 ಮಂದಿಯೂ ಮೃತಪಟ್ಟಿರುವುದು ದೃಢಪಟ್ಟಿದೆ.

ಮೃತಪಟ್ಟವರನ್ನು ಕೆ.ಎಂ.ಲಕ್ಷ್ಮಿನಾರಾಯಣ, ಕೆ.ಜಿ.ಹನುಮಂತ ರಾಯಪ್ಪ, ರಂಗಪ್ಪ, ಶಿವಕುಮಾರ್, ರಮೇಶ್, ಮಾರೇಗೌಡ, ಪುಟ್ಟರಾಜು, ನಾಗರಾಜರೆಡ್ಡಿ ಎಂದು ಗುರುತಿಸಲಾಗಿದೆ.  ಸೂರತ್ಕಲ್ ಬಳಿಯ ಬೈಕಂಪ್ಪಾಡಿಯ ಫಾತಿಮಾ ರಜೀನಾ ಎಂಬುವರು ಭಾನುವಾರವೇ ಮೃತಪಟ್ಟಿರುವುದು ದೃಢಪಟ್ಟಿತ್ತು.

ದೇಹಗಳನ್ನು ತರಲು ಸಿದ್ಧತೆ :  ಶ್ರೀಲಂಕಾ ಪ್ರವಾಸಕ್ಕೆ ತೆರಳಿ ಬಾಂಬ್ ಸ್ಫೋಟ ಘಟನೆಯಲ್ಲಿ ಮೃತಪಟ್ಟಿರುವ ಕನ್ನಡಿಗರ ಮೃತ ದೇಹಗಳನ್ನು ರಾಜ್ಯಕ್ಕೆ ತರಲು ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ತಾವು ಮಾತನಾಡಿದ್ದು, ಮೃತದೇಹಗಳನ್ನು ಕಳುಹಿಸಿಕೊಡಲು ಸಿದ್ಧತೆ ಮಾಡಿದ್ದಾರೆ. ಅಲ್ಲದೆ, ಶ್ರೀಲಂಕಾ ಪ್ರವಾಸದಲ್ಲಿದ್ದ ಕೆಲವು ಕನ್ನಡಿಗರು ನಾಪತ್ತೆಯಾಗಿದ್ದು, ಅವರ ಪತ್ತೆಗೂ ಕೂಡ ಅಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್‍ನ ಎಲ್ಲಾ ಏಳೂ ಮುಖಂಡರೂ ಸಾವು : ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್‍ನ ಏಳು ಮಂದಿಯೂ ಕೂಡ ಮೃತಪಟ್ಟಿರುವುದು ದೃಢಪಟ್ಟಿದೆ. ನಿನ್ನೆಯಷ್ಟೇ 5 ಮಂದಿ ಕಳೆಬರಗಳನ್ನು ಗುರುತು ಪತ್ತೆ ಹಚ್ಚಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತಿಬ್ಬರೂ ಕೂಡ ಮೃತಪಟ್ಟಿರುವುದು ಖಾತ್ರಿಯಾಗಿದೆ.

ಖುಷಿಯಾಗಿ ಜತೆ ಜತೆಯಾಗಿಯೇ ತೆರಳಿದವರು ಈಗ ಇಹ ಲೋಕ ತ್ಯಜಿಸಿರುವುದು ಕುಟುಂಬ ಸದಸ್ಯರಿಗೆ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವವರ ಕಳೆಬರಗಳನ್ನು ತರಲು ಕೊಲಂಬೋಗೆ ತೆರಳಿರುವ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಮತ್ತಿತರರ ಜೆಡಿಎಸ್ ತಂಡ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಅಡಕಮಾರನಹಳ್ಳಿಯ ಮಾರೇಗೌಡ ಹಾಗೂ ಅರೆಕ್ಯಾತನಹಳ್ಳಿಯ ಪುಟ್ಟರಾಜು ಅವರ ಶವಗಳನ್ನು ನೋಡಿದ ಕೂಡಲೇ ದಿಗ್ಭ್ರಾಂತರಾಗಿದ್ದಾರೆ.

Facebook Comments

Sri Raghav

Admin