ಸುಪ್ರೀಂ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸು ರಾಷ್ಟ್ರಪತಿಗಳ ಅಂಗಳಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.26-ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು ಮಾಡಿರುವ ಒಂಬತ್ತು ನ್ಯಾಯಾಧೀಶರ ಹೆಸರುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಅಂತಿಮ ಅಂಕಿತಕ್ಕೆ ಕಳುಹಿಸಿದ್ದು, ಶೀಘ್ರದಲ್ಲೇ ನೇಮಕಾತಿ ಆದೇಶ ಹೊರಬೀಳಲಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ.

ಸುಪ್ರೀಂಕೋರ್ಟ್‍ಗೆ 34 ನ್ಯಾಯಮೂರ್ತಿಗಳ ನೇಮಕಕ್ಕೆ ಅನುಮತಿ ನೀಡಲಾಗಿದ್ದು, ಸಧ್ಯ 10 ನ್ಯಾಯಾಧೀಶರ ಕೊರತೆ ಎದುರಿಸುತ್ತಿದೆ. ಕಳೆದ ವಾರ ಸುಪ್ರೀಕೋರ್ಟ್‍ನ ಕೊಲಿಜಿಯಂ ಕರ್ನಾಟಕದ ಮಹಿಳಾ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಇಬ್ಬರು ಮಹಿಳಾ ನ್ಯಾಯಾಧೀಶರು ಸೇರಿದಂತೆ ಒಂಬತ್ತು ನ್ಯಾಯಮೂರ್ತಿಗಳ ಹೆಸರುಗಳನ್ನು ಶಿಫಾರಸು ಮಾಡಿತ್ತು.

ಹಾಲಿ ಸುಪ್ರೀಂ ಸಿಜೆ ರಮಣ ಅವರ ಅವಧಿ 2027 ಸೆಪ್ಟೆಂಬರ್‍ವರೆಗೆ ಇದ್ದು, ಅವರ ನಂತರ ಕರ್ನಾಟಕದ ನಾಗರತ್ನ ಅವರು ಮುಖ್ಯನ್ಯಾಯಮೂರ್ತಿ ಸ್ಥಾನ ಅಲಂಕರಿಸುವ ಸಾಧ್ಯತೆಗಳಿವೆ. ಎಲ್ಲ ಅಂದುಕೊಂಡಂತೆ ನಡೆದರೆ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮಹಿಳಾ ಮುಖ್ಯನ್ಯಾಯಮೂರ್ತಿಗಳಾಗಿ ಕನ್ನಡತಿ ನಾಗರತ್ನ ಅವರು ನೇಮಕಗೊಳ್ಳುವುದು ಬಹುತೇಕ ಖಚಿತಪಟ್ಟಿದೆ.

ಈಗಾಗಲೇ ಒಂಬತ್ತು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‍ಗೆ ನೇಮಕ ಮಾಡಲು ಮಾಡಿರುವ ಶೀಫಾರಸಿಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ ನ್ಯಾಯಮೂರ್ತಿಗಳ ನೇಮಕದ ಅಧಿಸೂಚನೆ ಹೊರಬೀಳಲಿದೆ ಎಂದು ಮೂಲಗಳು ಉಲ್ಲೇಖಿಸಿವೆ.

Facebook Comments