ಮೈಸೂರು ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ, ಇಂದು ಮತ್ತೆ 9 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು,ಏ.15- ದಿನ ಕಳೆದಂತೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಏರುತ್ತಲೇ ಇದೆ. ಇಂದು ಹೊಸ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಸೋಂಕಿತರ ಮುಖ್ಯ ಉತ್ಪಾದನಾ ಕೇಂದ್ರವೆಂದೇ ಹೇಳಲಾಗಿರುವ ಜ್ಯುಬಿಲೆಂಟ್ ಪ್ಯಾರಾಮೆಡಿಕಲ್ಸ್ ಕಂಪನಿಯ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.
ಸುಮಾರು 500ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‍ನಲ್ಲಿಟ್ಟಿದ್ದು ನಿನ್ನೆ ರಾತ್ರಿ ಸುಮಾರು 150 ಮಂದಿಯ ವರದಿ ಬಂದಿದೆ. ಅದರಲ್ಲಿ ಒಂಭತ್ತು ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ಈಗಾಗಲೇ ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 48 ಮುಟ್ಟಿದ್ದು, ಈ 9 ಮಂದಿ ಸೇರಿದರೆ 50ರ ಗಡಿ ದಾಟಿದಂತಾಗಿದೆ. ಸೋಂಕಿತರ ಕುಟುಂಬಗಳನ್ನು ಈಗ ಹೋಂ ಕ್ವಾರಂಟೈನ್‍ನಲ್ಲಿಡಲು ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದೆ. ಈ ಹಿಂದೆ ಕ್ವಾರಂಟೈನ್‍ನಲ್ಲಿದ್ದವರನ್ನು ಮೇ. 3ರವರೆಗೆ ಅಲ್ಲೆ ಇರುವಂತೆ ಸೂಚನೆ ನೀಡಲಾಗಿದೆ.

ಇಡೀ ನಂಜನಗೂಡು ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಹಲವು ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಯಾರೂ ಕೂಡ ಹೊರಬರದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಪೊಲೀಸರು ಹಾಗೂ ಹೋಂಗಾರ್ಡ್‍ಗಳನ್ನು, ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕೂಡ ನಿಯೋಜಿಸಲಾಗಿದೆ.

Facebook Comments

Sri Raghav

Admin