ಮಂಗಳೂರು ಮಾರ್ಗವಾಗಿ ಪಾಕ್‍ಗೆ ಪರಾರಿಯಾಗುವ ಉಗ್ರರ ಸಂಚು ವಿಫಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15- ಸಬ್‍ಇನ್ಸ್‍ಪೆಕ್ಟರ್ ವಿಲ್ಸನ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರು ಮಂಗಳೂರು ಮಾರ್ಗವಾಗಿ ಪಾಕಿಸ್ತಾನಕ್ಕೆ ಪರಾರಿಯಾಗುವುದನ್ನು ತಪ್ಪಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ಉಡುಪಿಯಲ್ಲಿ ಬಂಧಿಸಲಾಗಿರುವ ಅಬ್ದುಲ್ ಶಮೀಮ್ (32) ಹಾಗೂ ತೌಫಿಕ್ (28) ಮಂಗಳೂರಿನಿಂದ ವಿಮಾನ ಇಲ್ಲವೆ ಸಮುದ್ರ ಮಾರ್ಗವಾಗಿ ಪಾಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸಿದ್ದರು. ತಮಿಳುನಾಡು-ಕೇರಳ ಗಡಿಭಾಗದ ಚೆಕ್‍ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‍ಐ ವಿಲ್ಸನ್ ಎಂಬುವವರನ್ನು ಈ ಇಬ್ಬರು ಉಗ್ರರು ನಿರ್ದಯವಾಗಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಹತ್ಯೆ ನಂತರ ಇಬ್ಬರು ಉಗ್ರರು ಬೆಂಗಳೂರಿನಿಂದ ಪರಾರಿಯಾಗಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡು ಅಲ್ಲಿಂದ ಪಾಕಿಸ್ತಾನಕ್ಕೆ ಪರಾರಿಯಾಗಲು ಮುಂದಾಗಿದ್ದರು. ಆದರೆ, ಹಂತಕರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದರಿಂದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗದೆ ಮಹಾರಾಷ್ಟ್ರದಲ್ಲೇ ತಲೆಮರೆಸಿಕೊಂಡಿದ್ದರು.

ಮಹಾರಾಷ್ಟ್ರದಿಂದ ಪಾಕಿಸ್ತಾನಕ್ಕೆ ತೆರಳುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಮನಗಂಡ ಉಗ್ರರು ಮಹಾರಾಷ್ಟ್ರದಿಂದ ರತ್ನಗಿರಿ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿ ಅಲ್ಲಿಂದ ವಿಮಾನ ಇಲ್ಲವೆ ಸಮುದ್ರ ಮಾರ್ಗವಾಗಿ ಪಾಕಿಸ್ತಾನಕ್ಕೆ ತೆರಳಲು ಪ್ಲಾನ್ ರೂಪಿಸಿದ್ದರು. ಆದರೆ, ಉಗ್ರರ ಈ ಮಾಹಿತಿಯನ್ನು ಕಲೆ ಹಾಕಿದ ಸಿಸಿಬಿ ಪೊಲೀಸರು ಉಡುಪಿಯಲ್ಲಿ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಉಗ್ರರನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಬಂಧಿಸಲಾದ ಮೂವರು ಶಂಕಿತ ಉಗ್ರರೊಂದಿಗೆ ಶಮೀಮ್ ಮತ್ತು ತೌಫಿಕ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನಾಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು.

# ಸಿಕ್ಕಿಬಿದ್ದ 9 ಉಗ್ರರು:
ತಮಿಳುನಾಡು ಪೊಲೀಸರು ನೀಡಿದ ಮಾಹಿತಿ ಮೇರೆಗೆ ರಾಜ್ಯಾದ್ಯಂತ ರಕ್ತಪೀಪಾಸು ಉಗ್ರರಿಗಾಗಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೂ 9 ಉಗ್ರರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಮೂವರು, ಗುಂಡ್ಲುಪೇಟೆಯಲ್ಲಿ ಇಬ್ಬರು, ಕೋಲಾರದಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ನಿನ್ನೆ ಉಡುಪಿಯಲ್ಲಿ ಇಬ್ಬರು ಉಗ್ರರನ್ನು ಬಂಧಿಸುವ ಮೂಲಕ 9 ಉಗ್ರರನ್ನು ಸೆರೆ ಹಿಡಿಯಲಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತಷ್ಟು ಉಗ್ರ ಬೇಟೆಗೆ ಶೋಧ ಕಾರ್ಯ ತೀವ್ರಗೊಂಡಿದೆ.

Facebook Comments

Sri Raghav

Admin