93 ಖೈದಿಗಳಿಗೆ ಬಿಡುಗಡೆ ಭಾಗ್ಯ ಸೇರಿ ಸಚಿವ ಸಂಪುಟದದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Cabinet--02

ಬೆಂಗಳೂರು, ಅ.26 : ರಾಜ್ಯದ ವಿವಿಧ ಕಾರಾಗೃಹದಲ್ಲಿ ಇರುವ 93 ಜೀವಾವಧಿ ಶಿಕ್ಷಾ ಬಂಧಿಗಳಿಗೆ ನ್ನಡತೆಯ ಆಧಾರದ ಮೇಲೆ ಬಿಡುಗಡೆ ಭಾಗ್ಯ ದೊರಕಿಸಿಕೊಡಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಪ್ರಮುಖ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.  ಬೆಂಗಳೂರಿನ 41, ಮೈಸೂರಿನ 16, ಬೆಳಗಾವಿಯ ಐದು ಹಾಗೂ ಕಲಬುರಗಿಯ ನಾಲ್ಕು, ವಿಜಯಪುರದ ಏಳು, ಬಳ್ಳಾರಿಯ ಒಂಭತ್ತು ಹಾಗೂ ಧಾರವಾಡದ ಮೂರು ಸನ್ನಡತೆಯ ಖೈದಿಗಳೂ ಸೇರಿದಂತೆ ಒಟ್ಟು 93 ಮಂದಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಮಹಾಮಸ್ತಕಾಭಿಷೇಕ :
ಅನುಷ್ಠಾನಗೊಳಿಸಬೇಕಾದ ಯೋಜನೆಗಳು ನವೆಂಬರ್ 4 ರಂದು ಅಂತಿಮ
ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನವೆಂಬರ್ 4 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಸಭೆಯಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಕುರಿತು ಅಂತಿಮಗೊಳಿಸಲಾಗುವುದು.

ಶೀತಲ ಗೃಹ ಮಾರ್ಪಾಡು:
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ಬಾಗಲಕೋಟೆ, ವಿಜಯಪುರದಲ್ಲಿ ಏಳು ಉಗ್ರಾಣಗಳಲ್ಲಿ ಶೇಕಡಾ 40 ಸ್ಥಳವನ್ನು ಶೀತಲ ಗೃಹಗಳನ್ನು ಮಾರ್ಪಾಡು ಮಾಡಲು ಹಾಗೂ ಖಾಸಗೀ ಸಹಭಾಗಿತ್ವದಲ್ಲಿ ಇವುಗಳ ಕಾರ್ಯಾಚರಣೆ ಹಾಗೂ ಕಾರ್ಯ ನಿರ್ವಹಣೆಗೆ ಟೆಂಡರ್ ಆಹ್ವಾನಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ:
ರೈತರ ಸಹಭಾಗಿತ್ವದಲ್ಲಿ ಹೊಸ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲು ಯೋಜನಾ ಸಮಿತಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಾರ್ವಜನಿಕ ಖಾಸಗೀ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕರ ಸಂಸ್ಥೆಗಳಿಗೆ ಪೂರಕ ಅವಕಾಶ ಕಲ್ಪಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಪಶು ವೈದ್ಯರ ನೇಮಕಕ್ಕೆ ಸಮ್ಮತಿ:
ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಪಶು ವೈದ್ಯಾಧಿಕಾರಿಗಳ 126 ಹುದ್ದೆಗಳನ್ನು ಭರ್ತಿ ಮಾಡಲು ಅನುವಾಗುವಂತೆ ಹೈದರಾಬಾದ್ – ಕರ್ನಾಟಕ ಸ್ಥಳೀಯ ವೃಂದ ವಿಶೇಷ ನೇಮಕಾತಿ ನಿಯಮ 2017 ಕ್ಕೆ ಸಂಪುಟ ಸಮ್ಮತಿಸಿದೆ.

ಆವರ್ತ ನಿಧಿಯಲ್ಲಿ ಬಿಡುಗಡೆಯಾದ ಹಣ ಮನ್ನಾ :
ತೋಟಗಾರಿಕಾ ಉತ್ಪನ್ನಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿತವಾದ ಸಂದರ್ಭದಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಆವರ್ತ ನಿಧಿಯಿಂದ ಬಿಡುಗಡೆಯಾದ ಹಣದಲ್ಲಿ 19.93 ಕೋಟಿ ರೂ ಮನ್ನಾ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ:
ಕಾರ್ಮಿಕ ಇಲಾಖೆಯಲ್ಲಿರುವ ವಿವಿಧ ಯೋಜನೆಗಳನ್ನು ವಿಲೀನಗೊಳಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕಾರ್ಮಿಕ ಬಂಧು ಮುಖಾಂತರ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ-2017:
ತೃತೀಯ ಲಿಂಗಿಗಳನ್ನು ಮುಖ್ಯ ವಾಹಿನಿಗೆ ತರಲು ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ-2017 ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯಲ್ಲಿ ಸರ್ಕಾರಿ ಹಾಗೂ ಶಿಕ್ಷಣ ಒಳಗೊಂಡಂತೆ ಎಲ್ಲೆಡೆ ಸಮಾನ ಸೌಲಭ್ಯ ಕಲ್ಪಿಸಲು ಸಂಪುಟ ಸಮ್ಮತಿಸಿದೆ.

ಒಳಚರಂಡಿ ವ್ಯವಸ್ಥೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ 1886 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿತ್ತು. ತದ ನಂತರ, ಯೋಜನಾ ವೆಚ್ಚವನ್ನು 1500 ಕೋಟಿ ರೂ ಗಳಿಗೆ ಮಿತಿಗೊಳಿಸಿ, ಉಳಿಕೆ ಹಣವನ್ನು ಜಲ ಮಂಡಲಿ ಮತ್ತು ಇತರ ಸೌಕರ್ಯಕ್ಕಾಗಿ ಬಳಸಲು ಸೂಚಿಸಿ ಸಚಿವ ಆಡಳಿತಾತ್ಮಕ ಅನುಮೋದನೆ ನೀಡಿದೆ.

100 – ಹಾಸಿಗೆಗಳ ಆಸ್ಪತ್ರೆ ನಿರ್ಮಾಣ:
ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ 18.75 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 – ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮೂಲ ಒಪ್ಪಂದ ತಿದ್ದುಪಡಿ:
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಂದರು ಭೂಮಿಯನ್ನು ಅದರ ಚಟುವಟಿಕೆಗಳಿಗೆ ಹಾಗೂ ಲಂಗರು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಮೂಲ ಒಪ್ಪಂದದ ಪತ್ರದ ಕೆಲವು ಕಂಡಿಕೆಗಳನ್ನು
ತಿದ್ದುಪಡಿ ಹಾಗೂ ಸೇರ್ಪಡೆ ಮಾಡಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಅವರು ಹೇಳಿದರು.

ವಸತಿ ಸಮುಚ್ಛಯ ನಿರ್ಮಾಣ : 

ರಾಜ್ಯದ ರಾಜಧಾನಿ ಬೆಂಗಳೂರಿನ ಜೀವನಬಿಮಾನಗರದಲ್ಲಿ 27.50 ಕೋಟಿ ರೂ ವೆಚ್ಚದಲ್ಲಿ ಎ ಗುಂಪಿನ ಅಧಿಕಾರಿಗಳ ನೂತನ ವಸತಿ ಗೃಹಗಳ ಸಮುಚ್ಛಯವನ್ನು ನಿರ್ಮಿಸಲು ಸಂಪುಟವು ಅನುಮೋದನೆ ನೀಡಿದೆ. ಹುಬ್ಬಳ್ಳಿ ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 73 ರ 2.2 ಕಿ. ಮೀ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲು ಸಂಪುಟ ಅನುಮೋದಿಸಿದೆ.

> ರಾಜ್ಯ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮುಖಾಂತರ ಕೈಗೊಳ್ಳಲಾಗಿರುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ 13 ಪರಿಷ್ಕೃತ ಯೋಜನೆಗಳಿಗೆ 398.30 ಕೋಟಿ ರೂ ಅಂದಾಜಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ವಸತಿ ಶಿಕ್ಷಣ ಸಮಿತಿಯ ಸಂಘದ ವತಿಯಿಂದ 64.53 ಕೋಟಿ ರೂ. ವೆಚ್ಚದಲ್ಲಿ ಒಂಭತ್ತು ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹಿತ್ಲಕಾರಗದ್ದೆ ವಾರ್ಡ್ ನಂ 12 ಕ್ಕೆ ಬಾಳಗಿಮನೆ ವಾರ್ಡ್ ನಂ. 5 ಭಾಗಶಃ ಪ್ರದೇಶವನ್ನು ಸೇರ್ಪಡೆ ಮಾಡಲು ಸಂಪುಟ ಸಮ್ಮತಿ ಸೂಚಿಸಿದೆ.

> ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂರತ್ಕಲ್ ಪ್ರದೇಶದಲ್ಲಿ 61 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚೆನ್ನಯ್ಯ ನಾಲೆ) ಸರಪಳಿ 72.26 ಕಿ. ಮೀ ನಿಂದ 214.30 ಕಿ. ಮೀ ವರೆಗಿನ ನಾಲೆಯ ಆಧುನೀಕರಣ ಕಾಮಗಾರಿಯ ಅಂದಾಜು 809.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಮಲಪ್ರಭಾ ನದಿಯಿಂದ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಬೈಲಹೊಂಗಲ ವ್ಯಾಪ್ತಿಯಲ್ಲಿನ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 248.20 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಂಪುಟ ಸಮ್ಮತಿಸಿದೆ.

> ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೀಳಗಿ ಕ್ಷೇತ್ರದ ಹೆರಕಲ್ ಏತ ನೀರಾವರಿ ಯೋಜನೆಯಡಿ 6,100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತ ಸಂಬಂಧ ತಯಾರಿಸಲಾದ 238 ಕೋಟಿ ರೂ ಪರಿಷ್ಕೃತ ಅಂದಾಜಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಭೀಮಾ ನದಿಯ ಯಾದಗಿರಿ ಬ್ಯಾರೇಜಿನ ಹಿನ್ನೀರಿನಿಂದ ನೀರನ್ನು ಮೇಲೆತ್ತಿ ಯಾದಗಿರಿ ತಾಲ್ಲೂಕಿನ 35 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್‍ನ ಕೆರೆಗಳನ್ನು ತುಂಬಿಸುವ 440 ಕೋಟಿ ರೂ ಅಂದಾಜು ಮೊತ್ತದ ಹೊಸ ಸೊಂತಿ ಏತ ನೀರಾವರಿ ಯೋಜನೆಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

> ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

> ಬಳ್ಳಾರಿಯ ಕಮಲಾಪುರದಲ್ಲಿರುವ ಕಿರು ಮೃಗಾಲಯವನ್ನು ಬಳಿಕಲ್ಲಿಗೆ ವರ್ಗಾವಣೆ ಮಾಡಿ 65.63 ಕೋಟಿ ರೂ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಎಂದು ಅಭಿವೃದ್ಧಿಪಡಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

> ಕಲಬುರಗಿ ಜಿಲ್ಲೆಯ ಕೊಟ್ನೂರು ಗ್ರಾಮದಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯ ಕಚೇರಿ ಹಾಗೂ ಬೇಳೆ ಸಂಸ್ಕರಣಾ ಘಟಕ ಸ್ಥಾಪನೆಗೆ 2.4 ಹೆಕ್ಟೇರ್ ಜಾಗವನ್ನು ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಅವರು ವಿವರಿಸಿದರು.

Facebook Comments

Sri Raghav

Admin