ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಮುಂಬೈನಲ್ಲಿ ಶೇ.96ರಷ್ಟು ಜನರ ಆದಾಯ ಕುಸಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ.28- ದೇಶದ ಆರ್ಥಿಕತೆಯ ರಾಜಧಾನಿ ಎಂದೇ ಬಿಂಬಿತವಾಗಿರುವ ಮುಂಬೈ ಕಳೆದ ವರ್ಷ ಕರಾಳವಾಗಿತ್ತು. ಶೇ.96ರಷ್ಟು ಜನರಿಗೆ ತಮ್ಮ ಆದಾಯದಲ್ಲಿ ಗಣನೀಯ ಇಳಿಕೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವರದಿಯಾಗಿದೆ. ಸಾಮಾಜಿಕ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಆಹಾರ ಸಿಗದೆ ಎಷ್ಟು ಮಂದಿ ಬಸವಳಿದಿದ್ದರು ಎಂಬುದರ ಬಗ್ಗೆ ಮಾಹಿತಿ ಹುಡುಕಿ ಹೊರಟಾಗ ಕಂಡ ದೃಶ್ಯಗಳು ಹಾಗೂ ಕಲೆ ಹಾಕಿದ ಅಂಕಿ-ಅಂಶಗಳನ್ನು ನೋಡಿದರೆ ಶೇ.96ರಷ್ಟು ಜನ ತಮ್ಮ ಆದಾಯದಲ್ಲಿ ಕಂಡೂ ಕೇಳರಿಯದಷ್ಟು ಇಳಿಕೆ ದಾಖಲಿಸಿತ್ತು ಎಂದು ಹೇಳಿದೆ.

ಕೋವಿಡ್ ಸಂದರ್ಭದ ಲಾಕ್‍ಡೌನ್ ಸೇರಿದಂತೆ ನಂತರದ ದಿನಗಳಲ್ಲಿ ಕೆಲಸವಿಲ್ಲದೆ ಮನೆಯಲ್ಲೇ ಕುಳಿತವರು ಹಾಗೂ ಪ್ರತಿದಿನ ದುಡಿದೇ ತಿನ್ನಬೇಕಾದ ಶೇ.50ರಷ್ಟು ಜನ ಹಸಿವಿನಿಂದ ಬಳಲಿದ್ದಾರೆ. ದುಡಿಯಲು ಕೆಲಸವಿಲ್ಲದೆ, ಆಹಾರ ಖರೀದಿಸಲು ಹಣವಿಲ್ಲದೆ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿತ್ತು.

ಆದರೆ, ಕೆಲವು ಸಾಮಾಜಿಕ ಕಾರ್ಯಕರ್ತರು, ಸಂಘ-ಸಂಸ್ಥೆಗಳು, ಕೆಲ ಜನಪ್ರತಿನಿಗಳು ನೆರವಿಗೆ ಬಂದು ಸ್ವಲ್ಪಮಟ್ಟಿಗೆ ನೆರವಾಗಿದ್ದಾರೆ. ಊಟ ಸಿಗದೆ ಅದೆಷ್ಟು ಸಂಖ್ಯೆಯಲ್ಲಿ ಜನ ನೀರು ಕುಡಿದು ಒಂದೇ ಕಡೆ ಕುಳಿತು ಕಾಲ ಕಳೆದ ಪರಿಸ್ಥಿತಿಯನ್ನು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಇಂತಹ ಪರಿಸ್ಥಿತಿ ಉದ್ಭವಿಸಿತ್ತು.

ಎರಡು ತಿಂಗಳ ಲಾಕ್‍ಡೌನ್‍ನಲ್ಲಿ ಇಂತಹ ಪರಿಸ್ಥಿತಿ ಇದ್ದರೆ, ನಂತರದ ದಿನಗಳಲ್ಲಿ ಕೆಲಸಕ್ಕೆ ಹೋದರೂ ಕೂಡ ಭಯದ ವಾತಾವರಣ ಸೃಷ್ಟಿಯಾಗಿತ್ತು.ಆದರೂ ಕಳೆದ ಡಿಸೆಂಬರ್‍ವರೆಗೂ ಸಾಮಾನ್ಯ ಜನರ ಬದುಕು ಮಾತ್ರ ಸರಿಹಾದಿಗೆ ಬರಲಿಲ್ಲ. ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಮೇಲಿರುವ ಕೆಲ ಸಮುದಾಯಗಳು ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದ್ದಾರೆ.

ಇತ್ತೀಚೆಗೆ ಮತ್ತೆ ಕೊರೊನಾದಂತಹ ಎರಡನೆ ಅಲೆ ಶುರುವಾಗಿ ಮಹಾರಾಷ್ಟ್ರದಲ್ಲಿ ಹಲವೆಡೆ ಲಾಕ್‍ಡೌನ್ ಘೋಷಿಸಿರುವುದರಿಂದ ಜನರಲ್ಲಿ ಮತ್ತೆ ಭೀತಿ ಆವರಿಸಿದೆ. ಕೇವಲ ದುಡಿಯುವ ವರ್ಗವಲ್ಲದೆ ಕಾರ್ಪೊರೇಟ್ ವಲಯಗಳು ಕೂಡ ತಮ್ಮ ನಷ್ಟವನ್ನು ಸರಿದೂಗಿಸಲು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ.ಆದರೆ, ಈ ಮಹಾಮಾರಿ ವಕ್ಕರಿಸಿದರೆ ಸಾಮಾನ್ಯ ದಿನಗೂಲಿ ನೌಕರರು ಮತ್ತೆ ಉಪವಾಸ ಬೀಳುವುದು ನಿಶ್ಚಿತ ಎಂಬ ಭಯ ಆವರಿಸಿದೆ.

Facebook Comments

Sri Raghav

Admin