98 ಕೋಟಿ ರೂ. ವಿಶೇಷ ಅನುದಾನ ದುರ್ಬಳಕೆ : ಎಸಿಬಿಗೆ ಎನ್.ಆರ್.ರಮೇಶ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

BENGALURU
ಬೆಂಗಳೂರು, ಮೇ 18-ತ್ಯಾಜ್ಯ ಸಂಸ್ಕರಣಾ ಘಟಕಗಳಿರುವ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಸುಮಾರು 98 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಈ ಬಗ್ಗೆ ಸಿಬಿಐ, ಎಸಿಬಿ ಮತ್ತು ಬಿಎಂಟಿಎಫ್‍ನಲ್ಲಿ ದೂರು ದಾಖಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ತ್ಯಾಜ್ಯ ಸಂಸ್ಕರಣಾ ಘಟಕಗಳಿರುವ ಗ್ರಾಮಗಳು ಮತ್ತು ಅವುಗಳ ಸುತ್ತಲಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ವಿಶೇಷ ಅನುದಾನವನ್ನು ಶಾಸಕರು ತಮ್ಮ ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಇದರಲ್ಲಿ ಆರ್.ಆರ್.ನಗರದ ಜಂಟಿ ಆಯುಕ್ತ ವೀರಭದ್ರಪ್ಪ, ಕೆಂಗೇರಿ ಉಪವಿಭಾಗದ ಲೋಕೇಶ್, ಗುತ್ತಿಗೆದಾರರು, ಉಪ ಗುತ್ತಿಗೆದಾರರು ಶಾಮೀಲಾಗಿದ್ದಾರೆ. ಈ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಮೇಲ್ಕಂಡ ತನಿಖಾ ಸಂಸ್ಥೆಗಳಿಗೆ ದೂರು ನೀಡಿರುವುದಲ್ಲದೆ, ಶಾಸಕರೂ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ನಾಲ್ಕನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಕನ್ನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನಪಾಳ್ಯ ಮತ್ತು ಲಿಂಗಧೀರನಹಳ್ಳಿಗಳಲ್ಲಿರುವ ನಾಲ್ಕು ತ್ಯಾಜ್ಯ ಸಂಸ್ಕರಣಾ ಘಟಕಗಳಿರುವ ಗ್ರಾಮಗಳು ಮತ್ತು ಅವುಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿತ್ತು.
ಈ ಅನುದಾನವನ್ನು ಗ್ರಾಮಗಳ ರಸ್ತೆಗಳು, ಚರಂಡಿಗಳ ಅಭಿವೃದ್ಧಿಗೆ, ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಮಾತ್ರ ಬಳಸಬೇಕಾಗುತ್ತದೆ. ಸಂಬಂಧವಿಲ್ಲದ ಕಾಮಗಾರಿಗಳಿಗೆ ಬಳಸುವುದು ಕಾನೂನು ರೀತಿ ಶಿಕ್ಷಾರ್ಹ ಅಪರಾಧವಾಗಿದೆ. ವಿಶೇಷ ಅನುದಾನ ದುರ್ಬಳಕೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಶಾಸಕರು ಸಂಬಂಧವಿಲ್ಲದ ತಾವರೆಕೆರೆ, ರಾಮೋಹಳ್ಳಿ, ಕೆರೆ ಚೂಡನಹಳ್ಳಿ, ಕಗ್ಗಲೀಪುರ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಬಡಾವಣೆಗಳ ಅಭಿವೃದ್ಧಿಗೆ ಈ ಅನುದಾನವನ್ನು ಬಳಸಿಕೊಂಡಿದ್ದಾರೆ. ಸುಮಾರು 98 ಕೋಟಿಯಷ್ಟು ಅನುದಾನ ದುರ್ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ ರಮೇಶ್, ಹಲವು ಶೀರ್ಷಿಕೆಗಳಡಿಯಲ್ಲಿ ವಿವಿಧ ಮೊತ್ತದ ಅನುದಾನ ದುರ್ಬಳಕೆಯಾಗಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಕಳೆದ ಸಾಲಿನಲ್ಲಿ 12 ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಯಶವಂತಪುರ ಕ್ಷೇತ್ರದ ನಾಲ್ಕು ಘಟಕಗಳಿಗೆ 60 ಕೋಟಿ ಬಿಡುಗಡೆಯಾಗಿದೆ. ಇದಲ್ಲದೆ, ವಿವಿಧ ಪ್ರಾಜೆಕ್ಟ್‍ಗಳಡಿ 38 ಕೋಟಿ ರೂ. ಸೇರಿದಂತೆ ಒಟ್ಟು 98 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದರ ದುರ್ಬಳಕೆಯಾಗಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.
ಉಪಗುತ್ತಿಗೆದಾರರ ಹೆಸರಿನಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿಯವರ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿರುವ ದಾಖಲೆಗಳನ್ನು ಕೂಡ ಪ್ರದರ್ಶಿಸಿದರು.
98 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಶೇ.10ರಷ್ಟು ಕಾಮಗಾರಿಗಳನ್ನೂ ಸಹ ಮಾಡದೆ ಸಂಪೂರ್ಣ ವಂಚನೆ ಮಾಡಲಾಗಿದೆ.

 

ಇದಲ್ಲದೆ, ಇನ್ನೂ 120 ಕೋಟಿ ರೂ.ಗಳ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇಷ್ಟೆಲ್ಲ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.ನಾಲ್ಕು ಗ್ರಾಮಗಳನ್ನು ವಂಚಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ನಗರಾಭಿವೃದ್ದಿ ಸಚಿವರು, ಬಿಬಿಎಂಪಿ ಆಯುಕ್ತರು ಆ ಗ್ರಾಮಗಳ ಜನರ ಕ್ಷಮೆಯಾಚಿಸಬೇಕು. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು, ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin