ಕಾಂಗ್ರೆಸ್’ನಲ್ಲಿನ ಭಿನ್ನಮತ ಶಮನಕ್ಕೆ 26 ರಂದು ಸಮನ್ವಯ ಸಮಿತಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Congres---01

ಬೆಂಗಳೂರು, ಫೆ.22-ಆಂತರಿಕ ಬೇಗುದಿ, ಹಿರಿಯ ನಾಯಕರ ಕಡೆಗಣನೆ, ಪಕ್ಷದಿಂದ ಹೊರಹೋಗುತ್ತಿರುವವರ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಇದೇ 26 ರಂದು ಮಹತ್ವದ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ದಿಗ್ವಿಜಯ್‍ಸಿಂಗ್, ಎಂ.ವಿ.ರಾಜಶೇಖರನ್,  ಮಲ್ಲಿಕಾರ್ಜುನ್‍ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಒಳಗೊಂಡ 18 ಜನರ ಸಮಿತಿ 26 ರಂದು ಸಭೆ ನಡೆಸಲಿದೆ.

ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿರುವುದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡಿರುವುದು, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮಗ ಕುಮಾರಬಂಗಾರಪ್ಪ ಬಿಜೆಪಿ  ರ್ಪಡೆಯಾಗುತ್ತಿರುವುದು ಸೇರಿದಂತೆ ಇನ್ನು ಹಲವರು ಪಕ್ಷ ತೊರೆಯುವ ಹಾದಿಯಲ್ಲಿರುವ ವಿಷಯವನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.  ಪಕ್ಷದಲ್ಲಿ ಹಿರಿಯರಾದ ಜಾಫರ್‍ಶರೀಫ್, ಜನಾರ್ದನ ಪೂಜಾರಿ, ಎಸ್. ಎಂ.ಕೃಷ್ಣ, ಎಚ್.ವಿಶ್ವನಾಥ್ ಸೇರಿದಂತೆ ಮುಂತಾದವರನ್ನು ಕಡೆಗಣಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ಲದೆ, ಜನಾರ್ದನಪೂಜಾರಿ, ಎಚ್.ವಿಶ್ವನಾಥ್ ಅವರು ಬಹಿರಂಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದರು.

ಇದು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ತೀವ್ರ ಇರಿಸುಮುರಿಸಾಗುತ್ತಿತ್ತು. ಇಷ್ಟಾದರೂ ಹಿರಿಯರೊಂದಿಗೆ ಮುಖ್ಯಮಂತ್ರಿಗಳಾಗಲಿ, ಪಕ್ಷದ ಅಧ್ಯಕ್ಷರಾಗಲಿ ಒಂದು ಸಭೆಯನ್ನೂ ಮಾಡಿಲ್ಲ. ಹೈಕಮಾಂಡ್ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಇಲ್ಲ. ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವ ಸಂದರ್ಭದಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಅಲ್ಲದೆ, ಸದ್ಯದಲ್ಲೇ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳು ಎದುರಾಗಲಿದ್ದು, ಎಲ್ಲರ ಸಹಕಾರ ಅಗತ್ಯವಿದೆ.  ಕಾಂಗ್ರೆಸ್ ಪಕ್ಷದ ಒಳಸಂಘರ್ಷವನ್ನು ಬಗೆಹರಿಸಿಕೊಂಡು ಮುಂದುವರೆಯಬೇಕಾಗಿದೆ. ಹಾಗಾಗಿ 26ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಇಂದು ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆಯಲಾಗಿತ್ತು.ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿತ್ತು. ಆದರೆ ಇಂದಿನ ಸಭೆ ರದ್ದಾಗಿದ್ದು, 26ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ.  ಮೂಲಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸಿಗರ ಸಂಘರ್ಷ ಉಂಟಾದ ಸಂದರ್ಭದಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಹೈಕಮಾಂಡ್ ಸಮನ್ವಯ ಸಮಿತಿ ರಚಿಸಿತ್ತು. ಆ ಸಮನ್ವಯ ಸಮಿತಿ ಈವರೆಗೂ ಯಾವುದೇ ಮಹತ್ವದ ಸಭೆ, ನಿರ್ಣಯಗಳನ್ನು ಕೈಗೊಂಡಂತಿಲ್ಲ. ಈಗ ಒಳಬೇಗುದಿ ತಾರಕಕ್ಕೇರುವ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಸಭೆ ಕುತೂಹಲ ಪಡೆದುಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin