ಮಹಾರಾಷ್ಟ್ರದಲ್ಲಿದ್ದಾರೆ ಮಾದರಿ ಕೊರೊನಾ ವಾರಿಯರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಉಸ್ಮಾನಾಬಾದ್,ಮೇ.13- ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವವರು ಮಾತ್ರ ವಾರಿಯರ್‍ಗಳಲ್ಲ. ಸೋಂಕಿತರಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುವವರು ನಿಜವಾದ ವಾರಿಯರ್‍ಗಳು. ಮಹಾರಾಷ್ಟ್ರದ ಉಸ್ಮಾನಾಬಾದ್‍ನ ಹಳ್ಳಿಯೊಂದರ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಸೋಂಕಿತರಿಗೆ ಉಚಿತವಾಗಿ ಹಂಚುವ ಮೂಲಕ ನಿಜವಾದ ಕೊರೊನಾ ವಾರಿಯರ್ ಎನಿಸಿಕೊಂಡಿದ್ದಾರೆ.

ಕಸ್ಬೆ ತಡವಾಲೆ ಗ್ರಾಮದ ನಿವಾಸಿಯಾಗಿರುವ ಮನಿಷಾ ಬಾಲಾಜಿ ವಾಗ್ಮಾರೆ ಎಂಬಾಕೆ ತಮ್ಮ ಮನೆಯಲ್ಲೇ 100 ಆಹಾರ ಪೊಟ್ಟಣಗಳನ್ನು ತಯಾರಿಸಿ ಪ್ರತಿನಿತ್ಯ 32 ಕಿ.ಮೀ. ದೂರದಲ್ಲಿರುವ ಉಸ್ಮಾನಾಬಾದ್ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ತೆರಳಿ ಅಲ್ಲಿನ ಕೊರೊನಾ ಸೋಂಕಿತರಿಗೆ ಉಚಿತವಾಗಿ ಊಟ ಹಂಚುತ್ತ ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ.

ಪೂನಾದಲ್ಲಿ ತಂಗಿದ್ದ ಮನಿಷಾ ಅವರು ಮಹಾರಾಷ್ಟ್ರ ಪಬ್ಲಿಕ್ ಸರ್ವೀಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದರು. ಆದರೆ, ದೇಶದ್ಯಾಂತ ಸೋಂಕು ಉಲ್ಬಣಗೊಂಡ ಕಾರಣ ತಮ್ಮ ಊರಿಗೆ ಹಿಂತಿರುಗಿದ ನಂತರ ಈ ರೀತಿ ಸಮಾಜ ಸೇವೆ ಸಲ್ಲಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ.

ಸೋಂಕಿಗೆ ಗುರಿಯಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಊಟ ತಯಾರಿಸಿಕೊಳ್ಳಲು ಸಾಧ್ಯವಿಲ್ಲ. ಅಂತವರ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಉಚಿತ ಮನೆ ಊಟ ವಿತರಿಸುತ್ತಿದ್ದೇನೆ ಎನ್ನುತ್ತಾರೆ ಮಾದರಿ ಕೊರೊನಾ ವಾರಿಯರ್.

Facebook Comments

Sri Raghav

Admin