ಮೇಕೆದಾಟು ಯೋಜನೆಯ ತ್ವರಿತಗತಿಗೆ ಆಗ್ರಹಿಸಿ ಎಎಪಿಯಿಂದ ಉಪವಾಸ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.3- ಮೇಕೆದಾಟು ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಎಎಪಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ರಾಜಕೀಯ ಚಟುವಟಿಕೆ ವಿಭಾಗದ ಮುಖ್ಯಸ್ಥ ಎಸ್.ವಿ. ಫಣಿರಾಜ್, ಆ.5ರಂದು ನಗರದ ಆನಂದ್‍ರಾವ್ ಸರ್ಕಲ್ ಸಮೀಪದ ಗಾಂಧಿ ಪ್ರತಿಮೆ ಎದುರು ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.

ಪಕ್ಷದ ಸಂಚಾಲಕ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಎಎಪಿಯ ನೂರಾರು ಕಾರ್ಯಕರ್ತರು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. 12 ತಿಂಗಳ ಡೆಡ್‍ಲೈನ್ ಇಟ್ಟುಕೊಂಡು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಭವಿಷ್ಯದಲ್ಲಿ ಭಾರೀ ತೊಂದರೆ ಎದುರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಮೇಕೆದಾಟು ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಕುಂಟುನೆಪ ಹೇಳಿ ಯೋಜನೆಯನ್ನು ಮುಂದೂಡುವ ಮೂಲಕ ಜನರನ್ನು ವಂಚಿಸಿದವು. ಈಗ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಸಿಕ್ಕಿದ್ದರೂ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಕ್ಷುಲ್ಲಕ ರಾಜಕೀಯ ಹಾಗೂ ಆಡಳಿತ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೇಕೆದಾಟು ಎಂಬ ಅತ್ಯುತ್ತಮ ಯೋಜನೆ ನೆನೆಗುದಿಗೆ ಬಿದ್ದಿರುವುದು ವಿಪರ್ಯಾಸ ಎಂದು ಫಣಿರಾಜ್‍ರವರು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟುಗೆ ಅವಕಾಶ ನೀಡುವುದೇ ಇಲ್ಲವೆಂದು ತಮಿಳುನಾಡಿನ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಮೇಕೆದಾಟು ಯೋಜನೆಯ ಅಗತ್ಯವಿಲ್ಲವೆಂದು ಇದರಿಂದಲೇ ತಿಳಿಯುತ್ತದೆ ಎಂದು ಟೀಕಿಸಿದರು.

ದ್ವಂದ್ವನೀತಿಯನ್ನು ಬಿಟ್ಟು, ಮೇಕೆದಾಟು ವಿಷಯದಲ್ಲಿ ತಮ್ಮ ನಿಲುವು ಏನೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ಪಕ್ಷದ ಮಹಿಳಾ ಘಟಕದ ನಾಯಕಿ ಉಷಾ ಮೋಹನ್ ಹೇಳಿದರು.

Facebook Comments