ರಸ್ತೆ ಗುಂಡಿ ಸಂಬಂಧ ಎಎಪಿ ಕಾರ್ಯಪಡೆ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿಯು ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಪಕ್ಷದ ಮುಖಂಡ ಜಗದೀಶ್ ಕೆ.ಎನ್. ಮಹಾದೇವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ.

ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಸಮರ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದೆ. ಸೂಕ್ತ ಕಾನೂನು ಹೋರಾಟದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪಣತೊಟ್ಟಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ ತಕ್ಷಣವೇ ನಮ್ಮ ವಾಟ್ಸಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ ಎಂದರು.

ಬಿಬಿಎಂಪಿ, ಸ್ಥಳೀಯ ಶಾಸಕ, ಮಾಜಿ ಕಾಪೆರ್ರೇಟರ್, ಸಂಬಂಧಪಟ್ಟ ಅಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಆರಂಭಿಸುತ್ತೇವೆ. ರಾಜಧಾನಿ ಬೆಂಗಳೂರು ಹಾಗೂ ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ನಾವು ಸಂಪೂರ್ಣ ಸಿದ್ಧವಿದ್ದೇವೆ ಎಂದು ಜಗದೀಶ್ ಮಹಾದೇವ್ ಹೇಳಿದರು.

ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಬೆಂಗಳೂರಿನ ರಸ್ತೆಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ಮೊತ್ತವನ್ನು, ಅಂದರೆ ದಿನಕ್ಕೆ ಸರಾಸರಿ 11 ಕೋಟಿ ರೂ. ಖರ್ಚು ಮಾಡಿವೆ. ಇದು ಜನರ ತೆರಿಗೆ ಹಣವಾಗಿದ್ದು, ಇದಲ್ಲಾದ ಭ್ರಷ್ಟಾಚಾರ ಪ್ರಶ್ನಿಸುವ ಸಂಪೂರ್ಣ ಹಕ್ಕು ಜನರಿಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಹಾಗೂ ಜ್ಯೋತಿಷ್ ಕುಮಾರ್ ಉಪಸ್ಥಿತರಿದ್ದರು.

Facebook Comments