ಆರ್‌ಸಿಬಿ ಸ್ಟಾರ್ ಆಟಗಾರ ಎಬಿಡಿಗೂ ಕೊರೊನಾ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಜೋಹಾನ್ಸ್‍ಬರ್ಗ್, ಮಾ.20- ಐಪಿಎಲ್‍ಗೆ ಕಂಟಕಪ್ರಾಯವಾಗಿರುವ ಕೊರೊನಾ ವೈರಸ್ ಈಗ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಎಬಿಡಿವಿಲಿಯರ್ಸ್ ಆಸೆಗೂ ತಣ್ಣೀರಿರೆಚಿದೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ ನಂತರ ದಕ್ಷಿಣ ಆಫ್ರಿಕಾ ತೋರುತ್ತಿರುವ ಕಳಪೆ ಪ್ರದರ್ಶನದಿಂದ ಬೇಸತ್ತು ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲು ಚಿಂತಿಸಿದ್ದರು.

ಇಂಗ್ಲೆಂಡ್‍ನಲ್ಲಿ ನಡೆದ ಸೀಮಿತ ಓವರ್‍ಗಳ ವಿಶ್ವಕಪ್‍ನ ವೇಳೆಯೇ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳಲು ಎಬಿಡಿ ಚಿಂತಿಸಿದ್ದರು, ಆದರೆ ಆಗಾಗಲೇ ವಿಶ್ವಕಪ್‍ಗೆ ತಂಡ ಪ್ರಕಟಗೊಂಡಿದ್ದರಿಂದ ಅವರ ಆಸೆಗೆ ಬ್ರೇಕ್ ಹಾಕಲಾಗಿತ್ತು. ಈಗ ಚುಟುಕು ಕ್ರಿಕೆಟ್‍ನ ವಿಶ್ವಕಪ್‍ನಲ್ಲಿ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ಹೊತ್ತಿದ್ದ ಎಬಿಡಿ ಐಪಿಎಲ್‍ನಲ್ಲಿ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಪ್ರದರ್ಶಿಸಿ ದಕ್ಷಿಣ ಆಫ್ರಿಕಾ ಆಯ್ಕೆ ಮಂಡಳಿಯ ಗಮನ ಸೆಳೆದು ತಂಡಕ್ಕೆ ಮರಳಬೇಕೆಂದು ಅಂದಾಜಿಸಲಾಗಿತ್ತಾದರೂ, ಈಗ ಅವರ ಕನಸಿಗೆ ಕೊರೊನಾ ವೈರಸ್ ತಣ್ಣೀರೆರಚಿದೆ.

ಈ ನಡುವೆ ಸ್ವತಃ ಎಬಿಡಿವಿಲಿಯರ್ಸ್ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮೊದಲು ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ಪರ ಆಡುವತ್ತ ಗಮನ ಹರಿಸಿದ್ದೇನೆ, ನಂತರವಷ್ಟೇ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳುವ ಯೋಜನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಐಪಿಎಲ್‍ನ ಪ್ರತಿ ಆವೃತ್ತಿಯಲ್ಲೂ ಆರ್‍ಸಿಬಿ ತಂಡಕ್ಕೆ ಉತ್ತಮ ರನ್ ಗಳಿಸುವ ಮೂಲಕ ಉಪಯುಕ್ತ ಕಾಣಿಕೆಯನ್ನೇ ನೀಡುತ್ತ ಅಭಿಮಾನಿಗಳನ್ನು ರಂಜಿಸುತ್ತ ಬಂದಿದ್ದು,

ಈ ಬಾರಿಯ ಐಪಿಎಲ್‍ನಲ್ಲೂ ಸ್ಫೋಟಕ ಆಟಕ್ಕೆ ಮುಂದಾಗುತ್ತಾನೆ ಎಂದು ಹೇಳಿರುವ ಎಬಿಡಿಗೆ ಟ್ವೆಂಟಿ-20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ 11ರ ಬಳಗದಲ್ಲಿ ಗುರುತಿಸಿಕೊಳ್ಳುವ ಆಸೆಯಿದೆ ಆದರೂ ಅದಕ್ಕೆ ಕೊರೊನಾ ಕಾಟ ಶುರುವಾಗಿದೆ.

ಕೊರೊನಾ ಕಾಟದಿಂದ ಈಗಾಗಲೇ ಐಪಿಎಲ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಿದೆಯಾದರೂ ಆಗಲೂ ಸರಣಿ ಶುರುವಾಗುವುದು ಕೂಡ ಅನುಮಾನವೇ. ಒಂದು ವೇಳೆ ಚುಟುಕು ವಿಶ್ವಕಪ್‍ಗೂ ಮುನ್ನ ಐಪಿಎಲ್ 13ರ ಆವೃತ್ತಿ ನಡೆಯದಿದ್ದರೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳಬೇಕೆಂಬ ಎಬಿಡಿಯ ಕನಸು ನುಚ್ಚುನೂರಾದಂತೆಯೇ ಸರಿ.

Facebook Comments