ಸಿಎಎ, ಎನ್​ಆರ್​ಸಿ ಬಗ್ಗೆ ಅನಗತ್ಯ ಆತಂಕ ಬೇಡ : ಅಬ್ದುಲ್ ಅಜೀಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13- ರಾಜಕೀಯ ಕಾರಣಗಳಿಗೆ ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ, ಪೌರತ್ವ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗು ವುದಿಲ್ಲ. ಒಂದು ವೇಳೆ ಮುಸ್ಲಿಮರನ್ನು ದೇಶ ಬಿಟ್ಟು ಹೊರ ಕಳುಹಿಸುವ ಪ್ರಯತ್ನ ನಡೆದರೆ ಹಿಂದೂ ಸಹೋದರರೇ ಗಡಿಗೆ ಬಂದು ಅಡ್ಡ ನಿಂತು ರಕ್ಷಣೆ ನೀಡುತ್ತಾರೆ. ಅನಗತ್ಯವಾಗಿ ಗೊಂದಲಕ್ಕೊಳಗಾಗಬೇಡಿ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭರವಸೆ ನೀಡಿದ್ದಾರೆ.

ಈ ಸಂಜೆ ನ್ಯೂಸ್‍ನೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಅವರು, ಎನ್‍ಆರ್‍ಸಿ ಮತ್ತು ಸಿಎಎ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಸಿಎಎ ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ಜಾರಿಗೊಳಿಸಿದ್ದ ಕಾನೂನು. ಅದರಲ್ಲಿ ನೆರೆಯ ರಾಷ್ಟ್ರಗಳಿಂದ ಬಂದ ಅಲ್ಲಿನ ಅಲ್ಪಸಂಖ್ಯಾತ ಬಂಧುಗಳಿಗೆ ಭಾರತ ಪೌರತ್ವ ನೀಡಲು ಇದ್ದಂತಹ ಕಾಲಮಿತಿಯನ್ನು ಕಡಿಮೆ ಮಾಡಲಾಗಿದೆಯೇ ಹೊರತು ಬೇರೆ ಯಾವುದೇ ಮಹತ್ವದ ಬದಲಾವಣೆಗಳು ಇಲ್ಲ.

ಧರ್ಮದ ಆಧಾರದ ಮೇಲೆ ಭಾರತ ವಿಭಜನೆಯಾಗಿದ್ದರಿಂದ ಅಲ್ಲಿನ ಬಹುಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡಬೇಕು ಎಂಬುದು ಅವಾಸ್ತವಿಕ ವಾದ ಎಂದರು. ಭಾರತದಲ್ಲಿರುವ ಬಹುತೇಕ ಮುಸ್ಲಿಮರು ಇಲ್ಲಿನ ಮೂಲ ನಿವಾಸಿಗಳು. ಎಲ್ಲೋ ಹೊರ ದೇಶಗಳಿಂದ ಬಂದವರಲ್ಲ. ಈ ನೆಲದ ಮಣ್ಣಿನಲ್ಲಿ ಅವರ ಜನ ಜೀವನ ಬೆರೆತು ಹೋಗಿದೆ. ಈ ಹಿಂದೆ ಪಾಕಿಸ್ತಾನಕ್ಕೆ ಬರುವಂತೆ ಅಲ್ಲಿನ ಪ್ರಧಾನಿ ಮೊಹಮ್ಮದ್ ಆಲಿ ಜಿನ್ನಾ ಭಾರತೀಯರಿಗೆ ಆಹ್ವಾನ ನೀಡಿದಾಗ, 10 ಎಕರೆ ಜಮೀನಲ್ಲ 10 ಕೋಟಿ ಕೊಟ್ಟರೂ ನಾವು ಭಾರತ ಬಿಟ್ಟು ಬರುವುದಿಲ್ಲ ಎಂದು ಇಲ್ಲಿನ ಮುಸ್ಲಿಮರು ತಿರುಗೇಟು ನೀಡಿದ್ದರು.

ಸತ್ತರು ಇಲ್ಲೇ, ಬದುಕಿದರೂ ಇಲ್ಲೇ ಎಂಬುದು ನಮ್ಮೆಲ್ಲರ ಸಿದ್ಧಾಂತ. ಭಾರತ ಮುಸ್ಲಿಮರಿಗೆ ಅತಿ ಹೆಚ್ಚು ಪ್ರೀತಿ, ಗೌರವ ನೀಡಿದೆ. ದೇಶದ ಮೊದಲ ರಾಷ್ಟ್ರಪತಿ ಮುಸ್ಲಿಮರಾಗಿದ್ದರು ಎಂದರು. ಎನ್‍ಆರ್‍ಸಿ ನಡೆದರೆ ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಈಗಿನಿಂದಲೇ ಸಿದ್ಧಪಡಿಸಿಟ್ಟುಕೊಳ್ಳಿ. ಈ ನೆಲದಲ್ಲಿ ಹುಟ್ಟಿ ಬೆಳೆದವರಿಗೆ ದಾಖಲೆಗಳು ಸಾಕಷ್ಟಿರುತ್ತವೆ. ಅನಗತ್ಯವಾಗಿ ಗೊಂದಲಕ್ಕೊಳಗಾಗಿ ಅಪಪ್ರಚಾರಗಳಿಗೆ ಕಿವಿಗೊಡಬೇಡಿ.

ಒಂದು ವೇಳೆ ದಾಖಲೆಗಳು ಲಭ್ಯವಿಲ್ಲ ಎಂದರೂ ಏಕಾಏಕಿ ದೇಶ ಬಿಟ್ಟು ಕಳುಹಿಸಲು ಸಾಧ್ಯವಿಲ್ಲ. ಮೊದಲು ನೀವು ಈ ದೇಶದ ಪ್ರಜೆ ಅಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಾಬೀತುಪಡಿಸಬೇಕು.  ಅನಂತರ ಬಂಧನ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿದ್ದಾಗಲೂ ಕೂಡ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಒಂದು ವೇಳೆ ಯಾವುದೇ ದಾಖಲೆಗಳು ಸಿಗುವುದೇ ಇಲ್ಲ ಎಂದಾದರೂ ಕೂಡ ನಿಮ್ಮನ್ನು ದೇಶ ಬಿಟ್ಟು ಕಳುಹಿಸಲಾಗುವುದಿಲ್ಲ. ಈ ನೆಲದಲ್ಲೇ ಹುಟ್ಟಿ ಬೆಳೆದಿದ್ದರೆ ನಿಮ್ಮನ್ನು ಹಿಂದೂ ಸಹೋದರರೇ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ನಾನು ಪೊಲೀಸ್ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದೆ. ಜನರು ತೋರಿದ ಪ್ರೀತಿ ನನ್ನನ್ನು ರಾಜಕೀಯಕ್ಕೆ ಬರುವಂತೆ ಪ್ರೇರೆಪಿಸಿತು. ಚುನಾವಣೆಯಲ್ಲಿ ಗೆದ್ದು ಗೃಹ ಸಚಿವನಾಗಿ ರಾಜ್ಯದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವ ಶಾಶ್ವತ ವ್ಯವಸ್ಥೆಯನ್ನು ರೂಪಿಸಿ ಜನರ ಋಣ ತೀರಿಸಬೇಕೆಂದು ರಾಜಕೀಯಕ್ಕೆ ಬಂದೆ. ಆದರೆ, ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಜನ ನನ್ನನ್ನು ಗೆಲ್ಲಿಸಲಿಲ್ಲ. ಬಿಜೆಪಿ ನನಗೆ ಜನರ ಸೇವೆ ಮಾಡುವ ಅವಕಾಶ ನೀಡಿದೆ ಎಂದು ಹೇಳಿದರು.

ಧರ್ಮಾಧಾರಿತವಾಗಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನಗಳು ನಡೆಯು ತ್ತಿವೆ. ಇದು ಮುಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿ ಮಾಡಲಿದೆ. ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕು. ಧರ್ಮಾಧಾರಿತ ರಾಜಕಾರಣಕ್ಕೆ ಕಿವಿಗೊಡ ಬಾರದು. ಭಾವೈಕ್ಯತೆಯ ಭಾರತದಲ್ಲಿ ಎಲ್ಲರೂ ಸಹೋದರರಂತೆ ಬದುಕಬೇಕು. ಮುಸ್ಲಿಂ ಸಮುದಾಯದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಹಿಂದುಗಳು ಭಾಗವಹಿಸಬೇಕು.

ಹಿಂದು ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಮುಸಲ್ಮಾನರು ಹೆಗಲು ಕೊಡಬೇಕು. ಹಬ್ಬ ಹರಿದಿನಗಳಲ್ಲಿ ಕೂಡಿ ಆಚರಿಸುವಂತಹ ಸೌಹಾರ್ದತೆಯ ಕನಸು ನನಸಾಗಬೇಕು ಎಂಬುದು ನನ್ನ ಆಸೆ ಎಂದರು. ಭಾರತ ಎಂದೆಂದಿಗೂ ನಮ್ಮ ರಾಷ್ಟ್ರ. ನಮ್ಮ ದೇಶ ಭಕ್ತಿ ನಮ್ಮ ದೇಶದ ಶಕ್ತಿ. ರಾಜಕಾರಣ ಕ್ಕಾಗಿಯೇ ಜನರಲ್ಲಿ ಭಯ ಹುಟ್ಟುಹಾಕುವ ಹುನ್ನಾರಗಳು ನಡೆಯುತ್ತಿವೆ. ಮುಸ್ಲಿಮರು ಇದಕ್ಕೆ ಕಿವಿಗೊಡಬಾರದು ಎಂದು ಅಬ್ದುಲ್ ಅಜೀಂ ಒತ್ತಿ ಹೇಳಿದರು.

Facebook Comments